ಬೆಂಗಳೂರು: ದೇಶದ 75ನೇ ಸ್ವಾತಂತ್ರ್ಯ ಸಂಭ್ರಮದ ಸಂದರ್ಭದಲ್ಲಿ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಗುಣಗಾನ ಮಾಡಿದ್ದಾರೆ.
ಭಾರತದಿಂದ ಡೋರ್ನಿಯರ್ ವಿಮಾನ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದ ಅವರು, "ಭಾರತದ ಜಾಗತಿಕ ಪ್ರಾಬಲ್ಯವು ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಸಲ್ಲಿಸುತ್ತಿರುವ ಗೌರವವಾಗಿದೆ" ಅವರು ಮುಂದಿನ ದಾರಿಯನ್ನು ತೋರಿಸಿಕೊಟ್ಟವರು ಎಂದು ಬಣ್ಣಿಸಿದರು.
ಭಾರತ ವಿಶ್ವ ಶಕ್ತಿಯಾಗಿ ಬೆಳೆಯುತ್ತಿದೆ ಹಾಗೂ ಇನ್ನೂ ಬೆಳೆಯುತ್ತಲೇ ಇದೆ. ಈ ಶತಮಾನದ ಮಧ್ಯಭಾಗದ ವೇಳೆಗೆ, ನಾವು ಇಲ್ಲದಿದ್ದರೂ, ವಿಶ್ವ ವೇದಿಕೆಯಲ್ಲಿ ಪ್ರಧಾನ ಪಾತ್ರ ವಹಿಸುವ ಶಕ್ತಿಶಾಲಿ ಭಾರತವನ್ನು ನಾವು ನೋಡಬಹುದು. ಅದುವೇ ಪಂಡಿತ್ ನೆಹರೂ ಅವರಿಗೆ ಸಲ್ಲಿಸುವ ನಿಜವಾದ ಗೌರವ" ಎಂದು ಹೇಳಿದ್ದಾರೆ.
ಭಾರತದ ಸ್ವಾತಂತ್ರ್ಯ ದಿನದ ಬಗ್ಗೆ ಉಲ್ಲೇಖಿಸಿದ ಅವರು, 1947ರಲ್ಲಿ ಸ್ವಾತಂತ್ರ್ಯ ದೊರಕಿದ ಸಂದರ್ಭ ನೆಹರೂ ಅವರ ಪ್ರಸಿದ್ಧ "ಟ್ರೈಸ್ಟ್ ವಿದ್ ಡೆಸ್ಟಿನಿ" ("tryst with destiny") ಭಾಷಣದಿಂದ ತಾವು ಪ್ರೇರಿತರಾಗಿರುವುದಾಗಿ ಸ್ಪಷ್ಟಪಡಿಸಿದರು.
ಶ್ರೀಲಂಕಾ ವಿಶ್ವಸಂಸ್ಥೆಯ ಭಾಗವಾಗಲು ನೆಹರೂ ನೀಡಿದ ನೆರವನ್ನು ಕೂಡಾ ವಿಕ್ರಮಸಿಂಘೆ ಸ್ಮರಿಸಿಕೊಂಡರು. "ಶ್ರೀಲಂಕಾ ವಿಶ್ವಸಂಸ್ಥೆಗೆ ಪ್ರವೇಶ ಪಡೆಯಲು ನ್ಯೂಯಾರ್ಕ್‍ನಲ್ಲಿ ನಡೆಸಿದ ಪ್ರಯತ್ನಗಳಿಗೆ ನೆಹರೂ ಅವರ ಪ್ರತಿನಿಧಿ ವಿ.ಕೆ.ಕೃಷ್ಣ ಮೆನನ್ ಅವರು ನಮ್ಮ ತಂದೆಗೆ ಸಾಥ್ ನೀಡಿದ್ದರು. ನನ್ನ ತಂದೆ ನೆಹರೂ ಅವರನ್ನು ಚೆನ್ನಾಗಿ ಬಲ್ಲವರಾಗಿದ್ದರು. ಇಂಡಿಯಾ ಹೌಸ್‍ಗೆ ಕಾರಿನಲ್ಲಿ ಹೋಗುವ ಮಾರ್ಗ ಮಧ್ಯೆ ನಾನು ವಿದ್ಯಾರ್ಥಿಯಾಗಿ ಅವರನ್ನು ದೂರದಿಂದ ನೋಡಿದ್ದೆ" ಎಂದು ನೆನಪಿಸಿಕೊಂಡರು ಎಂದು ndtv.com ವರದಿ ಮಾಡಿದೆ.