ಶಹಜಹಾನ್‌ಪುರ: ಹಾವಿನೊಂದಿಗೆ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಉರಗ ತಜ್ಞರೊಬ್ಬರು ಅದರ ಕಡಿತಕ್ಕೊಳಪಟ್ಟು ಮೃತಪಟ್ಟ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಮರುವಝಾಲ ಗ್ರಾಮದ ದೇವೇಂದ್ರ ಮಿಶ್ರಾ ಎಂದು ಗುರುತಿಸಲಾಗಿದೆ.
ಹಾವುಗಳ ರಕ್ಷಣೆ ಮಾಡುವುದರಲ್ಲಿ ನಿಷ್ಣಾತರಾಗಿದ್ದ ಮಿಶ್ರಾ ಅವರು ಅದೇ ವಿಚಾರದಲ್ಲಿ ಗ್ರಾಮದಲ್ಲಿ ಪ್ರಸಿದ್ಧಿ ಹೊಂದಿದ್ದರು. 200ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದರು. ಹಾವೊಂದನ್ನು ಹಿಡಿದು ವಿಡಿಯೊ ಮಾಡಿಕೊಳ್ಳುತ್ತಿದ್ದಾಗ ಅದು ಕಚ್ಚಿದೆ ಎಂದು ವರದಿಯಾಗಿದೆ.
ವಿಷಕಾರಿ ಹಾವೊಂದನ್ನು ಹಿಡಿದಿದ್ದ ಮಿಶ್ರಾ ಅದನ್ನು ಕುತ್ತಿಗೆಗೆ ಸುತ್ತಿಕೊಂಡು ವಿಡಿಯೊಗೆ ಪೋಸ್ ಕೊಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಐದು ವರ್ಷ ವಯಸ್ಸಿನ ಬಾಲಕಿಯೊಬ್ಬಳ ಕುತ್ತಿಗೆಗೂ ಹಾವನ್ನು ಸುತ್ತಿ ತೋರಿಸಿದ್ದಾರೆ ಎನ್ನಲಾಗಿದೆ.
ವಿಡಿಯೊ ಚಿತ್ರೀಕರಣದ ವೇಳೆ ಮಿಶ್ರಾ ಅವರಿಗೆ ಹಾವು ಕಚ್ಚಿದೆ. ಇದರ ಬೆನ್ನಲ್ಲೇ, ಹಾವನ್ನು ಬುಟ್ಟಿಯೊಂದರಲ್ಲಿ ಮುಚ್ಚಿಟ್ಟ ಮಿಶ್ರಾ ಅವರು ಹಲವು ಗಿಡ-ಮೂಲಿಕೆಗಳ ಔಷಧದಿಂದ ಸ್ವಯಂ ಚಿಕಿತ್ಸೆ ಪಡೆದುಕೊಂಡರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟರು ಎನ್ನಲಾಗಿದೆ.
ಇದಾದ ಕೆಲವು ಗಂಟೆಗಳ ನಂತರ ಬುಟ್ಟಿಯನ್ನು ತೆರೆದು ನೋಡಿದಾಗ ಹಾವು ಕೂಡ ಮೃತಪಟ್ಟಿರುವುದು ತಿಳಿದುಬಂದಿದೆ.