HEALTH TIPS

ಪದೇ ಪದೇ ಬದಲಾಗುವ ಹವಾಮಾನದಿಂದ ಆರೋಗ್ಯ ಈ ರೀತಿ ಹದಗೆಡಬಹುದು, ಎಚ್ಚರಿಕೆ!

 ಮನುಕುಲ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಹವಾಮಾನ ಬದಲಾವಣೆಯು ಒಂದು.. ಇದು ನಮ್ಮ ಪರಿಸರದ ಜೊತೆಗೆ ಜನರ ಆರೋಗ್ಯಕ್ಕೂ ಬಹಳ ಕೆಟ್ಟದ್ದು.. ಸಾಮಾನ್ಯವಾಗಿ ನಮ್ಮ ದೇಹ ಹವಾಮಾನ ಬದಲಾದಾಗ ಅದಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರು ಸಹಜ. ಆದರೆ ಪದೇ ಪದೇ ಬದಲಾಗುವ ಹವಾಮಾನವು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದು. ಹಾಗಾದರೆ, ಹವಾಮಾನ ಬದಲಾವಣೆಯು ನಮ್ಮ ಆರೋಗ್ಯದ ಮೇಲೆ ಉಂಟು ಮಾಡುವ ಪರಿಣಾಮಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ಈ ಕೆಳಗೆ ನೀಡಲಾಗಿದೆ:

ಉಸಿರಾಟದ ಸೋಂಕುಗಳು

ಹವಾಮಾನ ಬದಲಾವಣೆಯು ವಾಯುಮಾಲಿನ್ಯವನ್ನು ಹೆಚ್ಚಿಸಬಹುದು. ಇದರಿಂದಾಗಿ ಗಾಳಿಯ ಮೂಲಕ ಹರಡುವ ಸೋಂಕುಗಳ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆಯಿದೆ. ಬಿಸಿಯಾದ ಗಾಳಿ, ತೇವಾಂಶ ರಹಿತ ಗಾಳಿ, ಧೂಳು, ಶಿಲೀಧ್ರಯುಕ್ತ ಗಾಳಿಯು ತೀವ್ರವಾದ ಸೈನಸ್ ಹಾಗೂ ಗಂಟಲಿನ ಸಮಸ್ಯೆಗಳಿಗೆ ಕಾರಣವಾಗುವುದು. ಜೊತೆಗೆ ಕಾಲೋಚಿತ ಅಸ್ತಮಾ ಮತ್ತು ಬ್ರಾಂಕೈಟಿಸ್ ಶೀತ ಗಾಳಿಯಿಂದ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಸೀಸನ್ ಆಧಾರದ ಮೇಲೆ ಇನ್‌ಹೇಲರ್ ನ್ನು ಬಳಸಲು ಶಿಫಾರಸ್ಸು ನೀಡಲಾಗುತ್ತದೆ.

ಕೀಟ ಮತ್ತು ನೀರಿನ ಸೋಂಕುಗಳು

ಹವಾಮಾನ ಬದಲಾವಣೆಯು ಕೀಟಗಳಿಂದ ಹರಡುವ ಸೋಂಕುಗಳು ಮತ್ತು ನೀರಿನಿಂದ ಹರಡುವ ರೋಗಗಳ ಹೆಚ್ಚಳಕ್ಕೆ ಕಾರಣವಾಗಬಹುದು. ಇದಕ್ಕೆ ಕಾರಣ, ಹಠಾತ್ ಪ್ರವಾಹ, ಅತೀವೃಷ್ಟಿ ಕೆಲವೊಮ್ಮೆ ಅನಾವೃಷ್ಟಿಯೂ ಆಗಿರಬಹುದು. ಅತಿಯಾದ ತೇವಾಂಶವು ಕೀಟಗಳ ಬೆಳವಣಿಗೆ ಹಾಗೂ ಹಲವಾರು ಬ್ಯಾಕ್ಟಿರಿಯಾ ಬೆಳವಣಿಗೆಗೆ ಸಹಕರಿಸುತ್ತವೆ. ಇವು ಮಲೇರಿಯಾ, ಅತಿಸಾರದಂತಹ ಸಾಂಕ್ರಾಮಿಕ ರೋಗಗಳ ಅಪಾಯವನ್ನು ಹೆಚ್ಚಿಸಬಹುದು.

ಶಾಖ ಮತ್ತು ತಾಪಮಾನ ಸಂಬಂಧಿತ ಪರಿಸ್ಥಿತಿಗಳು

ಏರುತ್ತಿರುವ ತಾಪಮಾನವು ವ್ಯಾಪಕವಾದ ತೀವ್ರತರವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಅಥವಾ ಉಲ್ಬಣಗೊಳಿಸಬಹುದು. ಹೆಚ್ಚಿನ ಶಾಖಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಬಿಸಿಲಿನ ಹೊಡೆತ (ಸನ್‌ಸ್ಟ್ರೋಕ್), ಹೀಟ್ ಸ್ಟ್ರೋಕ್, ಸ್ನಾಯು ಸೆಳೆತ, ಉಸಿರಾಟ ಮತ್ತು ಹೃದಯದ ಸಮಸ್ಯೆಗಳ ಹದಗೆಡುವಿಕೆ, ಕೆಲವೊಮ್ಮೆ ಸಾವು ಕೂಡ ಸಂಭವಿಸಬಹುದು. ಈ ಸಮಸ್ಯೆಗಳು ಹೆಚ್ಚಾಗಿ ಮಕ್ಕಳು, ಹಿರಿಯರು, ದೀರ್ಘಕಾಲದಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಜೊತೆಗೆ ಕಡಿಮೆ ಆರ್ಥಿಕ ಭದ್ರತೆ ಹೊಂದಿರುವವರು ಗುರಿಯಾಗುತ್ತಾರೆ. ಏಕೆಂದರೆ ಅವರಲ್ಲಿ ತಾಪಮಾನವನ್ನು ಎದುರಿಸುವ ಶಕ್ತಿ ಇರಲಾರದು. ಆದ್ದರಿಂದ ಇಂತಹವರು ಹವಾಮಾನ ಬದಲಾವಣೆಯ ವೇಳೆ ಜಾಗರೂಕರಾಗಿರಬೇಕು. ಜೊತೆಗೆ ಈ ಅತಿಯಾದ ತಾಪಮಾನವು ಮಾನವನ ನಡವಳಿಕೆ, ರೋಗ ಹರಡುವಿಕೆ, ಗಾಳಿಯ ಗುಣಮಟ್ಟ, ಆರೋಗ್ಯ, ಸಾರಿಗೆ ಹಾಗೂ ನೀರಿನಂತಹ ಸಾಮಾಜಿಕ ಮೂಲಸೌಕರ್ಯಗಳ ಮೇಲೆಯು ಪರಿಣಾಮ ಬೀರಬಹುದು.

ಮಾನಸಿಕ ಆರೋಗ್ಯ

ಹವಾಮಾನ ಬದಲಾವಣೆಯು ಜನರ ಯೋಗಕ್ಷೇಮ ಹಾಗೂ ಮಾನಸಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ಅದೇಗೆ ಅಂದ್ರೆ ಅಕಾಲಿಕ ಮಳೆ, ಪ್ರವಾಹದಂತಹ ಹವಾಮಾನ ವೈಪರೀತ್ಯಗಳಿಂದ ಜನರು ತಮ್ಮ ಮನೆ ಅಥವಾ ಉದ್ಯೋಗವನ್ನು ಕಳೆದುಕೊಳ್ಳಬೇಕಾಗಬಹುದು. ಅಷ್ಟೇ ಅಲ್ಲ, ತಮ್ಮ ನೆರೆಹೊರೆಯಿಂದ ಸಂಪರ್ಕವನ್ನು ಕಳೆದುಕೊಳ್ಳಬಹುದು. ಇದು ಜನರ ಮಾನಸಿಕ ಆರೋಗ್ಯದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.

ಆಹಾರ ಭದ್ರತೆ

ಹವಾಮಾನ ಬದಲಾವಣೆಗಳು ಬೆಳೆಗಳು ಮತ್ತು ಆಹಾರ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ. ಆಹಾರದ ಬೆಲೆಗಳು ಹೆಚ್ಚಾಗಬಹುದು, ಇದು ಜನರು ಆರೋಗ್ಯಕರ ಆಹಾರವನ್ನು ಸೇವಿಸುವಲ್ಲಿ ಕೊರತೆಯನ್ನು ಉಂಟುಮಾಡಬಹುದು. ಕಳಪೆ ಆಹಾರವು ಹಸಿವು, ಅಪೌಷ್ಟಿಕತೆ ಅಥವಾ ಸ್ಥೂಲಕಾಯತೆಗೆ ಕಾರಣವಾಗಬಹುದು. ಇದರ ಜೊತೆಗೆ ಹವಾಮಾನ ಬದಲಾವಣೆಯಿಂದಾಗಿ ಕೆಲವು ಆಹಾರಗಳ ಪೌಷ್ಟಿಕಾಂಶದ ಮೌಲ್ಯವು ಕಡಿಮೆಯಾಗಬಹುದು. ವಾತಾವರಣದಲ್ಲಿ ಹೆಚ್ಚಿದ ಇಂಗಾಲದ ಡೈಆಕ್ಸೈಡ್ ಮಟ್ಟ ಮತ್ತು ಮಣ್ಣಿನಲ್ಲಿನ ಪೋಷಕಾಂಶಗಳ ಬದಲಾವಣೆಯು ಅನೇಕ ಬೆಳೆಗಳಲ್ಲಿ ಕಡಿಮೆ ಪೋಷಕಾಂಶಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಜೊತೆಗೆ ಕಳೆಗಳು ಮತ್ತು ಕೀಟಗಳ ಹೆಚ್ಚಳವು ಹೆಚ್ಚಿನ ಪ್ರಮಾಣದಲ್ಲಿ ಸಸ್ಯನಾಶಕಗಳು ಮತ್ತು ಕೀಟನಾಶಕಗಳನ್ನು ಬಳಸಬೇಕಾಗುವುದು. ಇದು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು.

ಹವಾಮಾನ ಬದಲಾವಣೆಯನ್ನು ಎದುರಿಸುವುದು ಹೇಗೆ?

ಹವಾಮಾನ ಬದಲಾವಣೆಯು ಸಾಮಾನ್ಯವಾಗಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವಂತಹವರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇಂತಹವರು ಈ ಕೆಳಗಿನ ವಿಧಾನಗಳನ್ನು ಅನುಸರಿಸುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು:

ಮೂಲಭೂತ ನೈರ್ಮಲ್ಯ ಸಲಹೆಗಳನ್ನು ಅನುಸರಿಸುವುದು.

ಸ್ವಚ್ಛ ನೀರು ಹಾಗೂ ಆರೋಗ್ಯಕರ ಆಹಾರವನ್ನ ಸೇವಿಸುವುದು.

ನೀವು ವಾಸಿಸುವ ಜಾಗದಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡದಂತೆ ತಡೆಯುವುದು.

ಹೆಚ್ಚು ನೀರು ಕುಡಿಯುವುದು.

ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ.

ಮಾನಸಿಕ ಆರೋಗ್ಯದ ಕಡೆಗೆ ಗಮನ ಕೊಡುವುದು.


 

 

 

 

 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries