ಬರಗಾಂವ್ : ಟ್ಯಾಟೂ ಅಥವಾ ಹಚ್ಚೆ ಹಾಕಿಸಿಕೊಳ್ಳುವುದು ಎಂದರೆ ಹಲವರಿಗೆ ತುಂಬಾ ಇಷ್ಟ. ತಮ್ಮ ಪ್ರೀತಿ ಪಾತ್ರರ ಹೆಸರು, ತಮ್ಮ ಹೆಸರು ಇಲ್ಲವೇ ಯಾವುದಾದರೂ ಶಬ್ದ, ಚಿತ್ರಗಳ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ ಹಲವರು. ಇದೇ ಕಾರಣಕ್ಕೆ ಟ್ಯಾಟೂ ಹಾಕುವವರ ಸಂಖ್ಯೆ ಕೂಡ ವಿಪರೀತವಾಗಿ ಹೆಚ್ಚಾಗುತ್ತಿದೆ.
ಆದರೆ ಇಂಥ ಟ್ಯಾಟೂ ಪ್ರಿಯರಿಗೆ ಶಾಕ್ ನೀಡುವಂಥ ಘಟನೆ ಉತ್ತರ ಪ್ರದೇಶದ ವಾರಣಾಸಿಯ ಬರಗಾಂವ್ನಲ್ಲಿ ನಡೆದಿದೆ. ಟ್ಯಾಟೂ ಹಾಕಿಕೊಂಡಿರುವ ಇಬ್ಬರಿಗೆ ಎಚ್ಐವಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರಲ್ಲಿ ಒಬ್ಬಳು ಎಂಬಿಬಿಎಸ್ ವಿದ್ಯಾರ್ಥಿನಿ. ಇವರನ್ನು ಸ್ಥಳೀಯ ಪಂಡಿತ್ ದೀನದಯಾಳ್ ಉಪಾಧ್ಯಾಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇವರೆಲ್ಲರೂ ಒಂದೇ ಸೂಜಿಯಿಂದ ಟ್ಯಾಟೂ ಹಾಕಿಸಿಕೊಂಡಿದ್ದರ ಪರಿಣಾಮ ಈ ಸೋಂಕು ಕಾಣಿಸಿಕೊಂಡಿರುವುದಾಗಿ ಆಸ್ಪತ್ರೆಯ ಆಯಂಟಿ ರೆಟ್ರೋ ವೈರಲ್ ಟ್ರೀಟ್ಮೆಂಟ್ ಸೆಂಟರ್ನ ಡಾ.ಪ್ರೀತಿ ಅಗರ್ ವಾಲ್ ಹೇಳಿದ್ದಾರೆ. ಎಚ್ಐವಿ ಸೋಂಕಿತರೊಬ್ಬರು ಮೊದಲಿಗೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅದೇ ಸೂಜಿಯಿಂದ ಇವರಿಗೂ ಹಚ್ಚೆ ಹಾಕಲಾಗಿದೆ. ಆದ್ದರಿಂದ ಸೋಂಕು ಎಲ್ಲರಿಗೂ ತಗುಲಿದೆ ಎಂದಿದ್ದಾರೆ ಅವರು.
ಆರಂಭದಲ್ಲಿ ಈ ಎಲ್ಲರಿಗೂ ಸಾಮಾನ್ಯ ಜ್ವರ ಕಾಣಿಸಿಕೊಂಡಿತ್ತು. ನಂತರ ಶರೀರ ದುರ್ಬಲವಾಗುತ್ತಾ ಬಂದಿತು. ಪರೀಕ್ಷೆಗೆ ಒಳಪಡಿಸಿದಾಗ ಎಚ್ಐವಿ ಸೋಂಕು ಕಾಣಿಸಿಕೊಂಡಿದೆ ಎಂದು ಡಾ.ಪ್ರೀತಿ ಹೇಳಿದ್ದಾರೆ. ಇವರೆಲ್ಲಾ ಜಾತ್ರೆಯ ಸಮಯದಲ್ಲಿ ಟ್ಯಾಟೂ ಹಾಕಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ವಾಸ್ತವವಾಗಿ ಹಚ್ಚೆ ಹಾಕುವ ಸೂಜಿ ತುಂಬಾ ದುಬಾರಿಯಾಗಿದೆ. ಹಚ್ಚೆ ಮಾಡಿದ ನಂತರ, ಆ ಸೂಜಿಯನ್ನು ನಾಶಪಡಿಸಬೇಕು, ಆದರೆ ಹೆಚ್ಚಿನ ಹಣವನ್ನು ಗಳಿಸಲು, ಕಲಾವಿದರು ಸೂಜಿಯಿಂದ ಒಂದಕ್ಕಿಂತ ಹೆಚ್ಚು ಹಚ್ಚೆ ಹಾಕುತ್ತಾರೆ ಎನ್ನಲಾಗಿದೆ