ಮುಳ್ಳೇರಿಯ: ಸುಳ್ಯದ ದೇವಮ್ಮ ಸಭಾಭವನದಲ್ಲಿ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಆಟಿ ಸಾಹಿತ್ಯ ಸಂಭ್ರಮ – 2022 ನೆರವೇರಿತು. ಪುತ್ತೂರಿನ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ ಅಧ್ಯಕ್ಷ ಶಂಕರಲಿಂಗ ಕೆ. ತೊಡಿಕಾನ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಗಣೇಶ್ ಆಚಾರ್ಯ ಸುಳ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಸಾಹಿತ್ಯ ಸಂಭ್ರಮದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿಗೊಂಡ ಸಾಮಾಜಿಕ ಚಿಂತಕ ಮೋಹನ್ ನಂಗಾರು ಹಾಗೂ ನಾರಾಯಣ ನಾಯ್ಕ್ ಕುದುಕೋಳಿ, ಗೋಪಾಲ್ ಈಶ್ವರಡ್ಕ, ಧನ್ವಿ ರೈ ಪಾಣಾಜೆ, ವಿಂಧ್ಯಾ ಎಸ್ ರೈ ಇವರಿಗೆ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕ ಬ್ರಹ್ಮಕುಮಾರಿ ಉಮಾದೇವಿ ಸಾಧಕರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಚಂ.ಸಾ.ವೇ ಅಧ್ಯಕ್ಷ ಭೀಮರಾವ್ ವಾಷ್ಠರ್, ಜೇ.ಸಿ ಪಿ.ಎಸ್ ಗಂಗಾಧರ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ನಡೆದ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ನೆರೆದ ಜನರ ಮೆಚ್ಚುಗೆಗೆ ಪಾತ್ರವಾಯಿತು. ಕಾಸರಗೋಡಿನ ಯುವ ಕವಯಿತ್ರಿ ಕು. ಲತಾ ಆಚಾರ್ಯ ಬನಾರಿ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕವಿತೆ ಹಾಗೂ ಸಾಹಿತ್ಯದ ಬಗ್ಗೆ ಮಾತನಾಡಿದ ಅವರು ‘ಸಾಧ್ಯವಾದಷ್ಟು ಎಲ್ಲರೂ ಛಂದೋಬದ್ಧ ಕವನಗಳನ್ನು ರಚಿಸುವಂಥವರಾಗಬೇಕು’ ಎಂದು ಅಭಿಪ್ರಾಯ ಪಟ್ಟರು. ಇಪ್ಪತ್ತರಷ್ಟು ಕವಿಗಳು ಕವನ ವಾಚನಗೈದರು. ಹತ್ತು ಮಂದಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಜನಮನ ರಂಜಿಸಿದರು. ಸಮ್ಯಕ್ತ್ ಜೈನ್ ನೂಜಿಬಾಳ್ತಿಲ ಸ್ವಾಗತಿಸಿ, ಪೂರ್ಣಿಮಾ ಪೆರ್ಲಂಪಾಡಿ ವಂದಿಸಿದರು.