ಮುಳ್ಳೇರಿಯ: ಕಾರಡ್ಕ ಪಂಚಾಯಿತಿಯ ಕಾಡಗ, ಕೊಟ್ಟಂಗುಳಿ, ಮುಳಿಯಾರ್ ಪಂಚಾಯಿತಿಯ ಕಾನತ್ತೂರು, ದೇಲಂಪಾಡಿ ಪಂಚಾಯಿತಿಯ ಚಾಮೆಕೊಚ್ಚಿ ಪ್ರದಶದಲ್ಲಿ ಕಾಡಾನೆಗಳ ದಾಳಿಯಿಂದ ವ್ಯಾಪಕ ಕೃಷಿ ಹಾನಿಯುಂಟಾಗಿದೆ. ಕಾರಡ್ಕ ಪ್ರದೇಶದಲ್ಲಿ ಏಳು ಹಾಗೂ ಇತರೆಡೆ ಮೂರು ಆನೆಗಳ ಗುಂಪು ಕೃಷಿತೋಟಗಳಿಗೆ ನುಗ್ಗಿ ವ್ಯಾಪಕ ಹಾನಿ ನಡೆಸಿದೆ. ಕೃಷಿಕರು ವರ್ಷಕಾಲ ಬೆವರುಸುರಿಸಿ ಬೆಳೆಸಿದ ಕೃಷಿಯನ್ನು ಕಾಡಾನೆಗಳು ಒಂದೇ ರಾತ್ರಿಯಲ್ಲಿ ನಾಶಗೊಳಿಸಿದೆ.
ಕಾರಡ್ಕ ಅರಣ್ಯ ಕಚೇರಿ ವಠಾರದ ಕೊಟ್ಟಂಗುಳಿ, ಚಾಯಿತ್ತಲದಲ್ಲಿ ಅಪಾರ ಪ್ರಮಾಣದ ಕೃಷಿನಾಗೊಳಿಸಿದೆ. ಇಲ್ಲಿನ ಕುಞÂರಾಮನ್ ನಾಯರ್ ಅವರ ಕೃಷಿಭೂಮಿಗೆ ನುಗ್ಗಿದ ಆನೆಗಳು 15 ತೆಂಗು, 400ರಷ್ಟು ಬಾಳೆಯನ್ನು ಹಾಳುಗೆಡಹಿದೆ. ಭಾನುವಾರ ನಸುಕಿಗೆ ತೋಟದ ಬೇಲಿ ಕಿತ್ತು ನುಗ್ಗಿ ದಾಂಧಲೆ ನಡೆಸಿದೆ. ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಆನೆಗಳು ತೋಟಕ್ಕೆ ಲಗ್ಗೆಯಿಟ್ಟಿರುವುದು ಮನೆಯವರ ಗಮನಕ್ಕೆ ಬಂದಿರಲಿಲ್ಲ. ಕೊಟ್ಟಂಗುಳಿ ನಿವಾಸಿ ಮೋಹನನ್ ಎಂಬವರ ತೋಟದಲ್ಲಿ ಹಲವಾರು ಬಾಳೆ ಗಿಡಗಳನ್ನು ನಾಶಗೊಳಿಸಿದೆ. ಪಾಂಡಿ ಪ್ರದೇಶದ ನೇರೋಡಿ, ಚೆನ್ನಕುಂಡ್ ಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ ಕಾಡಾನೆಗಳು ವಿವಿಧೆಡೆ ಕೃಷಿಭೂಮಿಗೆ ನುಗ್ಗಿ ದಾಂಧಲೆ ನಡೆಸುತ್ತಿದೆ. ಇಲ್ಲಿನ ನಿವಾಸಿ ಸಉಧಾಕರನ್, ಅಚ್ಚುಬೆಳ್ಚಪ್ಪಾಡ ಎಂಬವರ ತೋಟದಲ್ಲಿ ಅಡಕೆ ಮರ, ಬಾಳೆ ಗಿಡ ಹಾನಿಗೈದಿದೆ. ಕಾನತ್ತೂರು ಪ್ರದೇಶದಲ್ಲಿ ಹಳೆಯ ನಾಲ್ಕು ತೆಂಗಿನ ಮರವನ್ನು ಧರಾಶಾಯಿಗೊಳಿಸಿದೆ. ಪವಿತ್ರನ್, ಗಂಗಾಧರನ್, ಕುಞÂರಾಮನ್, ದಾಮೋದರನ್, ಮಾಧವನ್, ಪ್ರಸನ್ನ, ನಾರಾಯಣನ್, ಅಶೋಕನ್, ಶಶಿ, ಬಲಚಂದ್ರನ್ ಎಂಬವರ ಮನೆಸನಿಹದ ಕೃಷಿಯನ್ನು ಹಾಳುಗೆಡಹುತ್ತಾ ಮುಂದಕ್ಕೆ ಸಂಚರಿಸಿದೆ. ಜನವಾಸ ಪ್ರದೇಶಗಳಿಗೆ ಹಾಡಹಗಲೇ ನುಗ್ಗುವ ಕಾಡಾನೆಗಳು ಜನರ ಜೀವಕ್ಕೂ ಅಪಾಯ ತಂದೊಡ್ಡುತ್ತಿದೆ. ಏಕ ಕಾಲಕ್ಕೆ ನಾಲ್ಕೈದು ಕೇಂದ್ರಗಳಲ್ಲಿ ಕಾಡಾನೆ ದಾಳಿ ನಡೆಸುತ್ತಿರುವುದರಿಂದ ಕಾರ್ಯಾಚರಣೆಗೆ ಸಮಸ್ಯೆಯುಂಟಾಗುತ್ತಿದೆ. ಕಾರಡ್ಕ ಬ್ಲಾಕ್ ಪಂಚಾಯಿತಿ ವತಿಯಿಂದ ಈಗಾಗಲೇ ಸೋಲಾರ್ ತೂಗುಬೇಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ತಿಗೊಂಡಲ್ಲಿ ಸಮಸ್ಯೆಗೆ ಒಂದಷ್ಟು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸುತ್ತಾರೆ.
ಕಾರಡ್ಕ ಪ್ರದೇಶದಲ್ಲಿ ಮತ್ತೆ ಕಾಡಾನೆ ದಾಳಿ: ವ್ಯಾಪಕ ಕೃಷಿ ನಾಶ
0
ಆಗಸ್ಟ್ 30, 2022