ಚಂಡೀಗಢ: ಮೊಹಾಲಿಯ ಚಂಡೀಗಢ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಯೋಧ ಭಗತ್ ಸಿಂಗ್ ಅವರ ಹೆಸರಿಡುವ ಪ್ರಸ್ತಾವನೆಗೆ ಪಂಜಾಬ್ ಹಾಗೂ ಹರ್ಯಾಣ ರಾಜ್ಯ ಸರ್ಕಾರಗಳು ಒಪ್ಪಿಕೊಂಡಿವೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವತ್ ಸಿಂಗ್ ಮಾನ್ ಶನಿವಾರ ಪ್ರಕಟಿಸಿದ್ದಾರೆ.
"ಚಂಡೀಗಢ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗುವುದು. ಈ ಸಂಬಂಧ ಪಂಜಾಬ್ ಹಾಗೂ ಹರ್ಯಾಣ ಒಮ್ಮತಕ್ಕೆ ಬಂದಿವೆ. ಇಂದು ಹರ್ಯಾಣದ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಜತೆ ಈ ಸಂಬಂಧ ಸಭೆ ನಡೆಸಿ ಚರ್ಚಿಸಲಾಗಿದೆ" ಎಂದು ಭಗವತ್ ಸಿಂಗ್ ಮಾನ್ ಟ್ವೀಟ್ ಮಾಡಿದ್ದಾರೆ.
"ಭಗತ್ ಸಿಂಗ್ ಅವರು ಯುವಪೀಳಿಗೆಯ ಸ್ಫೂರ್ತಿ. ಹೊಸ ವಿಮಾನ ನಿಲ್ದಾಣದ ನಿರ್ಮಾಣದಲ್ಲಿ ಹರ್ಯಾಣ ಸಮಪಾಲು ಹೊಂದಿರುವುದರಿಂದ, ಈ ಹೆಸರಿಗೆ ಪಂಚಕುಲ ಹೆಸರನ್ನು ಸೇರಿಸಬೇಕು. ಹರ್ಯಾಣ ಪರವಾಗಿ ಈ ಸಂಬಂಧ ಶಿಫಾರಸ್ಸನ್ನು ಪಂಜಾಬ್ ಸರ್ಕಾರಕ್ಕೆ ಕಳುಹಿಸಲಾಗಿದೆ. ಬಳಿಕ ಈ ಪ್ರಸ್ತಾವವನ್ನು ಕೇಂದ್ರಕ್ಕೆ ಕಳುಹಿಸಲಾಗುವುದು" ಎಂದು ಸಭೆಯ ಬಳಿಕ ದುಷ್ಯಂತ್ ಚೌಟಾಲಾ ಹೇಳಿದ್ದಾರೆ.