ನವದೆಹಲಿ: ಕಾಂಗ್ರೆಸ್ ಸಂಸದ ದೀಪೇಂದ್ರ ಹೂಡಾ ಅವರ ಬಟ್ಟೆಯನ್ನು ರಾಹುಲ್ ಗಾಂಧಿ ಅವರು ಹರಿಯುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಸಂದರ್ಭದ ವಿಡಿಯೊದ ಸ್ಕ್ರೀನ್‌ಶಾಟ್ ಒಂದನ್ನು ಬಿಜೆಪಿ ಹಂಚಿಕೊಂಡಿದೆ.
ರಾಹುಲ್ ಗಾಂಧಿ ಅವರನ್ನು ಶುಕ್ರವಾರ ದೆಹಲಿ ಪೊಲೀಸರು ವಶಕ್ಕೆ ಪಡೆದ ಸಂದರ್ಭದ ಸ್ಕ್ರೀನ್‌ಶಾಟ್ ಇದಾಗಿದೆ.
ದೀಪೇಂದ್ರ ಹೂಡಾ ಅವರ ಅಂಗಿಯನ್ನು ರಾಹುಲ್ ಗಾಂಧಿ ಅವರು ಹಿಡಿದೆಳೆಯುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ವೃತ್ತಾಕಾರದ ಗುರುತು ಮಾಡಿದೆ ಸಮರ್ಥನೆ ನೀಡಿದೆ.
ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಈ ಸ್ಕ್ರೀನ್‌ಶಾಟ್ ಅನ್ನು ಟ್ವೀಟ್ ಮಾಡಿದ್ದಾರೆ. 'ಪ್ರಿಯಾಂಕಾ ಗಾಂಧಿ ಅವರ ಕೈಯನ್ನು ದೆಹಲಿ ಪೊಲೀಸರು ಬಲವಂತವಾಗಿ ಎಳೆದಿದ್ದಾರೆ ಎಂಬ ಅಭಿಯಾನದ ನಂತರ ಇದೀಗ ಮತ್ತೊಂದು ಅಂತಹದ್ದೇ ಆರೋಪಕ್ಕೆ ಪುರಾವೆ ಸಿಕ್ಕಂತಾಗಿದೆ. ರಾಹುಲ್ ಗಾಂಧಿ ಅವರು ದೀಪೇಂದ್ರ ಹೂಡಾ ಅವರ ಅಂಗಿಯನ್ನು ಹರಿಯುತ್ತಿದ್ದಾರೆ. ಇದು ಉತ್ತಮ ಪ್ರತಿಭಟನಾ ಚಿತ್ರವಾಗಲಿದೆ. ಈ ಮೂಲಕ ದೆಹಲಿ ಪೊಲೀಸರ ವಿರುದ್ಧ ದಬ್ಬಾಳಿಕೆಯ ಆರೋಪ ಮಾಡಬಹುದು. ಒಡಹುಟ್ಟಿದ ಗಾಂಧಿ ಕುಟುಂಬ ಸದಸ್ಯರು ನಾಟಕೀಯ ರಾಜಕಾರಣದ ಮೂಲಕ ಮತ ಸೆಳೆಯುವಲ್ಲಿ ಗಟ್ಟಿಗರು' ಎಂದು ಅಮಿತ್ ಮಾಳವೀಯ ವ್ಯಂಗ್ಯವಾಡಿದ್ದಾರೆ.
ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ಶುಕ್ರವಾರ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿಯ ಬಳಿಯಿಂದ ರಾಷ್ಟ್ರಪತಿ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮಹಿಳಾ ಪೊಲೀಸರು ಬಲವಂತವಾಗಿ ವಾಹನ ಹತ್ತಿಸಲು ಯತ್ನಿಸಿದ್ದರು. ಪೊಲೀಸ್ ವಾಹನವನ್ನು ಏರಲು ಪ್ರಿಯಾಂಕಾ ತೀವ್ರ ಪ್ರತಿರೋಧ ಒಡ್ಡಿದಾಗ, ಅವರ ಕೈಕಾಲು ಹಿಡಿದು ವಾಹನದೊಳಕ್ಕೆ ಎಳೆದೊಯ್ದಿದ್ದರು.
ಈ ಕುರಿತಾದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ದೆಹಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ರಾಹುಲ್ ಗಾಂಧಿ ಅವರೇ ಮತ್ತೊಬ್ಬ ಕಾಂಗ್ರೆಸ್ ನಾಯಕನ ಬಟ್ಟೆಯನ್ನು ಹರಿದು ದೆಹಲಿ ಪೊಲೀಸರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿದ್ದಾರೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.