ಕುಂಬಳೆ: ಜಿಲ್ಲೆಯಲ್ಲೇ ಅತೀ ಎತ್ತರದ ಬೆಟ್ಟವಾದ, ಸಮುದ್ರಮಟ್ಟಕ್ಕಿಂತ 1060 ಪೀಟ್ ಎತ್ತರದ ಪ್ರವಾಸಿಧಾಮವೂ ಆಗಿರುವ ಪೊಸಡಿಗುಂಪೆಯ ತುತ್ತತುದಿಯಲ್ಲಿ ಭಾನುವಾರ ತಿರಂಗ ಹಾರಾಡಿ ಗಮನ ಸೆಳೆಯಿತು.
ವಿಶೇಷವೆಂದರೆ ಇಲ್ಲಿ ರಾಷ್ಟ್ರಧ್ವಜ ಹಾರಿಸಿದವರು ಸ್ಥಳೀಯರೋ, ಕಾಸರಗೋಡು ಜಿಲ್ಲೆಯವರೋ ಅಲ್ಲ. ಬೆಂಗಳೂರಲ್ಲಿ ಉದ್ಯಮಿಗಳಾಗಿರುವ ದಂಪತಿಗಳಾದ ಪ್ರಮೋದ್ ಮತ್ತು ಪ್ರಿಯಾಂಕ ಈ ಸಾಹಸ ಮಾಡಿದ್ದಾರೆ.
ಈಲ್ಲೆಯ ಪ್ರವಾಸಿ ಧಾಮಗಳಿಗೆ ಭೇಟಿ ನೀಡಲು ಕಳೆದ ಮೂರು ದಿನಗಳಿಂದ ಇಲ್ಲಿರುವ ಈ ದಂಪತಿಗಳ ಸ್ನೇಹಿತರೂ, ಅನಂತಪುರ ಹೋಂಸ್ಟೇ ನಿರ್ದೇಶಕರೂ ಆಗಿರುವ ಕೃಷ್ಣ ಆಳ್ವ ಇವರ ಸೂಚನೆಯಂತೆ ಭಾನುವಾರ ಪೊಸಡಿಗುಂಪೆ ಬೆಟ್ಟವನ್ನೇರಿ ರಾಷ್ಟ್ರಧ್ವಜಾರೋಹಣಗೈದು ನಮನ ಸಲ್ಲಿಸಿದ್ದಾರೆ. ಅತೀ ಎತ್ತರದಲ್ಲಿ ಗಾಳಿಯ ರಭಸಕ್ಕೆ ರಾಷ್ಟ್ರಧ್ವಜ ಅರಳಿ ಪಟಪಟನೆ ಹಾರಾಡುವುದು ನಿಜವಾಗಿಯೂ ಹೃದಯವನ್ನು ಪುಳಕಗೊಳಿಸಿತೆಂದು ದಂಪತಿಗಳು ಬಳಿಕ ಸಂತಸ ಹಂಚಿಕೊಂಡರು.
ತೆರಳುವಾಗಲೇ ಹಾರೆ, ಗುದ್ದಲಿ, ಕತ್ತಿಗಳನ್ನು ಕೊಂಡೊಯ್ದಿರುವುದು ಧ್ವಜಸ್ತಂಭ ಸ್ಥಾಪಿಸಲು ಸುಲಭವಾಯಿತೆಂದು ಅವರು ತಿಳಿಸಿದ್ದಾರೆ.