ಶ್ರೀನಗರ: ಭಾರತದೆಲ್ಲೆಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ಅತಿ ಸ್ಮರಣೀಯ ರೀತಿಯಲ್ಲಿ ಧ್ವಜಾರೋಹಣ ನೆರವೇರುತ್ತಿದೆ. ಈ ದಿನಕ್ಕೆ ಅತ್ಯಂತ ವಿಶೇಷ ಕಳೆ ತಂದದ್ದು, ಕಾಶ್ಮೀರದ ಶ್ರೀನಗರದ ಲಾಲ್ ಚೌಕ್‌ನಲ್ಲಿ ಮೊಳಗಿದ ವಂದೇ ಮಾತರಂ.
ಭಾರತದ ಬಾವುಟವನ್ನು ಹಿಡಿದು ಕೆಲವು ಯುವಕರು ವಂದೇ ಮಾತರಂ ಗೀತೆ ಹಾಡಿರುವ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಇದು ವಿಶೇಷ ಎನಿಸಲು ಕಾರಣ ಎಂದರೆ, ಲಾಲ್ ಚೌಕ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದವರ ಹತ್ಯ ಮಾಡಲಾಗುವುದು ಎಂದು ಪ್ರತಿವರ್ಷವೂ ಉಗ್ರರು ಘೋಷಿಸುತ್ತಲೇ ಬಂದಿದ್ದಾರೆ. ಇದರ ಹೊರತಾಗಿಯೂ 1992ರಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿ ತ್ರಿವರ್ಣ ಧ್ವಜವನ್ನು ಧೈರ್ಯದಿಂದ ಹಾರಿಸಿದ್ದರು. ಇದಾದ ಬಳಿಕ ಮತ್ತೆ ಇಲ್ಲಿ ತ್ರಿವರ್ಣ ಧ್ವಜದ ಹಾರಾಟ ನಡೆದಿದೆ.
ವೈರಲ್ ವಿಡಿಯೋದಲ್ಲಿ ನಾವು, ಯುವಕನೊಬ್ಬ ತ್ರಿವರ್ಣ ಬಣ್ಣವನ್ನು ತನ್ನ ದೇಹಕ್ಕೆ ಬಣ್ಣ ಬಳಿದುಕೊಂಡು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಬೀಸುತ್ತಿರುವುದನ್ನು ಕಾಣಬಹುದು. ಆತ ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಎಂದು ಘೋಷಿಸುತ್ತಿದ್ದಾನೆ. ಅವರ ಹಿಂದೆ ಇತರರು ಸಹ ಈ ಘೋಷಣೆಗಳನ್ನು ಪುನರಾವರ್ತಿಸುತ್ತಿದ್ದಾರೆ. ಈ ವಿಡಿಯೋಗೆ ಇದಾಗಲೇ ಹಲವಾರು ಕಮೆಂಟ್ಗಳು ಬಂದಿವೆ. ಧೈರ್ಯದಿಂದ ಮುನ್ನುಗ್ಗಿ ದೇಶಪ್ರೇಮ ಮೆರೆಯುತ್ತಿರುವ ಈ ಜನರಿಗೆ ಎಲ್ಲರೂ ಸಲಾಂ ಎನ್ನುತ್ತಿದ್ದಾರೆ.
ಅಂದಹಾಗೆ ಕೆಲ ದಿನಗಳ ಹಿಂದೆ ಶ್ರೀನಗರದ ಲಾಲ್ಚೌಕ್ವರೆಗೆ ತ್ರಿವರ್ಣ ಯಾತ್ರೆ ಕೈಗೊಳ್ಳಲಾಗಿತ್ತು. ಇದರಿಂದಾಗಿ ಇಡೀ ಲಾಲ್ ಚೌಕ್ ತ್ರಿವರ್ಣ ಧ್ವಜದಿಂದ ಆವೃತವಾಗಿತ್ತು. ಈ ರ್ಯಾಲಿಗೆ ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಚಾಲನೆ ನೀಡಿದ್ದರು.
ಈ ಕುರಿತು ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ ಅವರು, 'ಕೆಲವು ವರ್ಷಗಳ ಹಿಂದೆ ಲಾಲ್ ಚೌಕ್ ದೇಶ ವಿರೋಧಿ ಮತ್ತು ಪ್ರತ್ಯೇಕತಾವಾದಿ ಭಾವನೆಗಳಿಂದ ತುಂಬಿತ್ತು. ತ್ರಿವರ್ಣ ಧ್ವಜವನ್ನು ಹಾರಿಸಲು ಮುಂದಾದವರನ್ನು ಕೊಲ್ಲುವುದಾಗಿ ಉಗ್ರರು ಬೆದರಿಕೆ ಹಾಕಿದ್ದರು. 1992ರಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿ ತ್ರಿವರ್ಣ ಧ್ವಜವನ್ನು ಧೈರ್ಯದಿಂದ ಹಾರಿಸಿದರು, ಇದರಿಂದಾಗಿ ಭಾರತೀಯ ಜನತಾ ಯುವ ಮೋರ್ಚಾ 30 ವರ್ಷಗಳ ನಂತರ ಅದನ್ನು ಮತ್ತೆ ಹಾರಿಸಲು ಸಾಧ್ಯವಾಯಿತು ಎಂದಿದ್ದರು.