ತಿರುವನಂತಪುರ: ಸಾಮಾನ್ಯವಾಗಿ ಮುಸ್ಲಿಂ ಸಂಪ್ರದಾಯದ ಪ್ರಕಾರ, ಮದುಮಗಳು ತನ್ನ ಮದುವೆಗೆ ತಾನು ಹಾಜರು ಆಗುವುದಿಲ್ಲ. ಏಕೆಂದರೆ ಮದುವೆಯೆಂಬುದು ಇಸ್ಲಾಂನಲ್ಲಿ ಮದುಮಗ ಮತ್ತು ಮದುಮಗಳ ಅಪ್ಪನ ನಡುವೆ ನಡೆಯುವ ಒಪ್ಪಂದ. ಆದ್ದರಿಂದ ಮದುಮಗನ ಜತೆಗೆ ಮದುಮಗಳ ಅಪ್ಪ ವಿವಾಹದ ಸಂದರ್ಭದಲ್ಲಿ ಹಾಜರು ಇರುತ್ತಾರೆ.
ಅದರಲ್ಲಿಯೂ ಮಸೀದಿಯೊಳಕ್ಕೆ ಹೆಣ್ಣುಮಕ್ಕಳು ಹೋಗುವುದೇ ಇಲ್ಲ.
ಆದರೆ ಈ ಸಂಪ್ರದಾಯವನ್ನು ಮುರಿದು ಕೇರಳದ ಪರಕಡವು ಮೂಲದ ಮದುಮಗಳು ತನ್ನದೇ ಮದುವೆಗೆ ಹಾಜರಾಗಿ ಇತಿಹಾಸ ಸೃಷ್ಟಿಸಿದ್ದಳು. ಮಾತ್ರವಲ್ಲದೇ ಮಸೀದಿಯೊಳಕ್ಕೆ ಹೋಗಿ ನಿಖಾ ಮಾಡಿಕೊಂಡಿದ್ದಳು. ಆದರೆ ಇದೇ ಆಕೆ ಹಾಗೂ ಕುಟುಂಬಕ್ಕೀಗ ಮುಳುವಾಗಿದೆ. ಈ ರೀತಿ ಸಂಪ್ರದಾಯ ಮುರಿದು ಮಸೀದಿಯೊಳಕ್ಕೆ ಪ್ರವೇಶಿಸಿದ್ದೂ ಅಲ್ಲದೇ, ತನ್ನ ಮದುವೆಗೆ ತಾನೇ ಹಾಜರು ಆಗಿದ್ದು ಅಕ್ಷಮ್ಯ ಎಂದಿರುವ ಕೆಲವು ಮುಸ್ಲಿಂ ಮುಖಂಡರು ಈಗ ಆಕೆ ಹಾಗೂ ತಂದೆ ಕ್ಷಮೆ ಕೋರುವಂತೆ ಆಗ್ರಹಿಸುತ್ತಿದ್ದಾರೆ. ಮಾತ್ರವಲ್ಲದೇ, ಈ ಮದುವೆಗೆ ಅನುಮತಿ ನೀಡಿರುವ ಮಹಲ್ ಸಮಿತಿಯೂ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.
ಆಗಿದ್ದೇನು?
ಕೇರಳದ ಪರಕಡವು ಮೂಲದ ಕೆ.ಎಸ್.ಉಮ್ಮರ್ ಅವರು ತಮ್ಮ ಪುತ್ರಿ ಬಹಾಜಾ ಅವರ ಮದುವೆಯನ್ನು
ವಿಭಿನ್ನವಾಗಿ ಆಚರಿಸಬೇಕು ಎಂದುಕೊಂಡಿದ್ದರು. ಆಕೆಯ ಮದುವೆಗೆ ಖುದ್ದು ಆಕೆಯೇ ಹಾಜರು
ಇರಬೇಕು ಎನ್ನುವುದು ಅವರ ಆಸೆಯಾಗಿತ್ತು. ನಂತರ ಅದರಂತೆಯೇ ಅವರು ಮಗಳ ಮದುವೆಯನ್ನು
ಮಸೀದಿಯ ಒಳಗೆ ಮಾಡಿ, ಖುದ್ದು ಆಕೆಯೆ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ಇಸ್ಲಾಂನಲ್ಲಿ ಯಾವುದೇ ಸ್ಥಾನವಿಲ್ಲದ ಇಂತಹ ಆಚರಣೆಗಳನ್ನು ನಾವು ತಿರಸ್ಕರಿಸುವ ಸಮಯ ಬಂದಿದೆ. ನನ್ನ ಮಗಳು ಸೇರಿದಂತೆ ವಧುಗಳಿಗೆ ಅವರ ಮದುವೆಗೆ ಸಾಕ್ಷಿಯಾಗುವ ಹಕ್ಕಿದೆ. ಆದ್ದರಿಂದ ಇಂಥದ್ದೊಂದು ತೀರ್ಮಾನಕ್ಕೆ ಬಂದೆವು. ನಮ್ಮ ಈ ನಿರ್ಧಾರಕ್ಕೆ ವರನ ಮನೆಯವರೂ ಒಪ್ಪಿಕೊಂಡರು. ಈ ಹಿನ್ನೆಲೆಯಲ್ಲಿ ನಾವು ಮಹಲ್ ಸಮಿತಿಯನ್ನು ಸಂಪರ್ಕಿಸಿದೆವು. ಅವರ ಜತೆ ಚರ್ಚಿಸಿದ ಬಳಿಕ ನಮ್ಮ ಈ ವಿಭಿನ್ನ ಯೋಚನೆಗೆ ಅವರೂ ಅಭಿನಂದಿಸಿದರು. ಎಲ್ಲರ ಸಹಕಾರದಿಂದ ಸಂಪ್ರದಾಯ ಮೀರಿ ಮದುವೆ ಮಾಡಲು ಅನುಕೂಲವಾಯಿತು ಎಂದಿದ್ದರು ಉಮ್ಮರ್.
ಮದುವೆ ಮುಗಿಯುವವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಈ ಹೊಸ ಸಂಪ್ರದಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಡಲು ಶುರುವಾಯಿತೋ ಆಗಲೇ ಉಂಟಾಗಿದ್ದು ಸಮಸ್ಯೆ!
ಈ ಕುರಿತು ಮಾಹಿತಿ ನೀಡಿರುವ ವಧುವಿನ ಸಹೋದರ ಫಾಸಿಲ್ ಷಹಜಹಾನ್, ಮದುವೆ ಸಮಯದಲ್ಲಿ ಯಾವುದೇ ವಿವಾದ ಅಥವಾ ಪ್ರಶ್ನೆ ಇರಲಿಲ್ಲ. ನಂತರ ಕೆಲವರು ಫೇಸ್‍ಬುಕ್‍ನಲ್ಲಿ ಮದುವೆಯ ಬಗ್ಗೆ ಮೆಚ್ಚುಗೆಯಿಂದ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ವೀಡಿಯೋಗಳನ್ನು ಸಹ ಮಾಡಿದರು. ಇದಾದ ಬಳಿಕ ಈ ಕುರಿತು ಚರ್ಚೆ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ. ವಧು ಖುದ್ದು ಹಾಜರು ಇದ್ದು, ಮದುಮಗಳ ಸ್ಥಳದಲ್ಲಿ ಕುಳಿತುಕೊಳ್ಳಬಹುದೇ ಎಂದು ನಾವು ಮದುವೆ ನಡೆದ ಮಹ ಬಳಿ ಕೇಳಿದ್ದೆವು. ಮಹಲ್ ಕಮಿಟಿಯಲ್ಲಿ ಇವರೆಲ್ಲ ನಮಗೆ ಬಹಳ ವರ್ಷಗಳಿಂದ ಗೊತ್ತು ಎಂದು ಹೇಳಿ ಮಹಲ್ ಕಾರ್ಯದರ್ಶಿ ನಮಗೆ ಅನುಮತಿ ನೀಡಿದರು. ಮದುವೆಯಲ್ಲಿ 400 ಜನರು ಭಾಗವಹಿಸಿದ್ದರು. ಎಲ್ಲರಿಗೂ ಮದುವೆ ಸಂತೋಷವಾಯಿತು. ಆದರೆ ಈಗ ಗಲಾಟೆ ಶುರುವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಈಗ ಜಾಲತಾಣಗಳಲ್ಲಿ ಈ ಮದುವೆಯದ್ದೇ ಸುದ್ದಿ. ಹಲವರು ಇಂಥ ಮದುವೆಗೆ ಸಹಮತ ವ್ಯಕ್ತಪಡಿಸುತ್ತಿದ್ದರೆ, ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ವಧುವಿನ ತಂದೆ ಹೇಳಿರುವಂತೆ ಇಸ್ಲಾಂನಲ್ಲಿ ವಧು ಹಾಜರು ಇರಬಾರದು ಎಂಬ ಬಗ್ಗೆ ಯಾವುದೇ ವಿಚಾರ ಇಲ್ಲ ಎಂದೂ ಹೇಳುತ್ತಿದ್ದಾರೆ.