ಐಝ್ವಾಲ್: ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರು ಶನಿವಾರ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮಗಳು ವೈದ್ಯರೊಂದಿಗೆ ತೋರಿದ ದುರ್ವರ್ತನೆಗಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ ಮತ್ತು ತಮ್ಮ ಮಗಳ ವರ್ತನೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯ ಮಗಳು ಮಿಲ್ಲರಿ ಚಾಂಗ್ಟೆ ಅವರು ಕ್ಲಿನಿಕ್ ಒಂದರಲ್ಲಿ ವೈದ್ಯರನ್ನು ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಝೋರಂತಂಗ ಕ್ಷಮೆ ಯಾಚಿಸಿದ್ದಾರೆ.
ಈ ಘಟನೆಯು ವೈದ್ಯರನ್ನು ಕೆರಳಿಸಿದ್ದು, ಶನಿವಾರ ಎಂಟು ನೂರಕ್ಕೂ ಹೆಚ್ಚು ವೈದ್ಯರು ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಭಾರತೀಯ ವೈದ್ಯಕೀಯ ಸಂಘದ ಮಿಜೋರಾಂ ಘಟಕದ ಸದಸ್ಯರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನಾಕಾರರಲ್ಲಿ ಒಬ್ಬರಾದ ಎಲ್. ಹಮರ್, ಬುಧವಾರ ಐಜ್ವಾಲ್‌ನಲ್ಲಿನ ಸ್ಕಿನ್ ಸ್ಪೆಷಲಿಸ್ಟ್ ಮೇಲೆ ಛಂಗ್ಟೆ ದಾಳಿ ನಡೆಸಿದ್ದರು ಎಂದು ಹೇಳಿದ್ದಾರೆ. ಆಕೆ ಕ್ಲಿನಿಕ್‌ಗೆ ಅಪಾಯಿಂಟ್‌ಮೆಂಟ್ ತರಬೇಕಿತ್ತು ಎಂದು ವೈದ್ಯರು ಹೇಳಿರುವುದರಿಂದ ಕುಪಿತಗೊಂಡಿದ್ದ ಆಕೆ ವೈದ್ಯರ ಮೇಲೆ ದಾಳಿ ಮಾಡಿದ್ದಳು.
ಘಟನೆ ಬಳಿಕ ಸಿಎಂ ಝೋರಂತಂಗ ಅವರೇ ತೆರಳಿ ಸಂತ್ರಸ್ತ ವೈದ್ಯರ ಬಳಿ ಕ್ಷಮೆ ಯಾಚಿಸಿದ್ದಾರೆ ಎಂದು ವರದಿಯಾಗಿದೆ.
"ವೈದ್ಯರ ಈ ರೀತಿಯ ಹಲ್ಲೆ ಮತ್ತೆ ಸಂಭವಿಸಬಾರದು ಎಂದು ನಾವು ಬಯಸುತ್ತೇವೆ" ಎಂದು IMA ಯ ಮಿಜೋರಾಂ ಘಟಕವು ಹೇಳಿಕೆಯಲ್ಲಿ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಚರ್ಮರೋಗ ವೈದ್ಯರ ಬಳಿ ಹೋಗಿ ಕ್ಷಮೆಯಾಚಿಸಿದ್ದೇನೆ ಎಂದು ಮುಖ್ಯಮಂತ್ರಿ ಇನ್ಸ್ಟಾಗ್ರಾಮ್ ನಲ್ಲಿ ಹೇಳಿದ್ದಾರೆ. ಅದೇ ವೇಳೆ ಚಾಂಗ್ಟೆ ವಿರುದ್ಧ "ಬಲವಾದ ಕ್ರಮ" ತೆಗೆದುಕೊಳ್ಳದ ಐಎಂಎಗೆ ಝೋರಂತಂಗ ಧನ್ಯವಾದ ಅರ್ಪಿಸಿದರು.
ಈ ಕುರಿತು ಮಾತನಾಡಿದ ಮುಖ್ಯಮಂತ್ರಿ, ನನ್ನ ಮಗಳ ವೈದ್ಯರ ವರ್ತನೆಯನ್ನು ಸಮರ್ಥಿಸಿಕೊಳ್ಳಲು ನಾವು ಏನೂ ಹೇಳುವುದಿಲ್ಲ. ನಾವು ಸಾರ್ವಜನಿಕರು ಮತ್ತು ವೈದ್ಯರಲ್ಲಿ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದಾರೆ, ಇದಕ್ಕೂ ಮೊದಲು, ಚಾಂಗ್ಟೆ ಅವರ ಸಹೋದರ ರಾಮಥಾನ್ಸಿಯಾಮಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದ್ದಾರೆ. ಮಾನಸಿಕ ಒತ್ತಡದಿಂದ ತಂಗಿ ಸ್ಥಿಮಿತ ಕಳೆದುಕೊಂಡಿದ್ದಾಳೆ ಎಂದು ಹೇಳಿದ್ದರು.