ನವದೆಹಲಿ :ಕೇಂದ್ರ ಭಾರತ ಮತ್ತು ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಮುಂದಿನ 3-4 ದಿನಗಳವರೆಗೆ 200 ಮಿಲಿಮೀಟರ್ ಮಳೆಯಾಗುವ ಸಾಧ್ಯತೆಯಿದ್ದು, ಹಲವು ಕಡೆಗಳಲ್ಲಿ ಪ್ರವಾಹ ಭೀತಿ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಶನಿವಾರ ಸಂಜೆ ವಾಯವ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಂಭವಿಸಿದ್ದು, ಇದು ವಾಯವ್ಯ ಮುಖವಾಗಿ ಒಡಿಶಾ ಹಾಗೂ ಛತ್ತೀಸ್‍ಗಢದತ್ತ ಬಲವಾದ ಗಾಳಿ ಬೀಸುವ ನಿರೀಕ್ಷೆ ಇದೆ ಎಂದು ಹೇಳಿದೆ.
ಇದರಿಂದಾಗಿ ಮುಂದಿನ 4-5 ದಿನಗಳ ಕಾಲ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
"ಒಡಿಶಾ ಹಾಗು ಕೊಂಕಣ ಪ್ರದೇಶದ ಕೆಲ ಭಾಗಗಳಲ್ಲಿ ಈಗಾಗಲೇ ವ್ಯಾಪಕವಾಗಿ ಮಳೆಯಾಗುತ್ತಿದೆ. ವಾಯುಭಾರ ಕುಸಿತದ ಪರಿಣಾಮವಾಗಿ ಮಳೆ ಕೇಂದ್ರ ಭಾರತದಲ್ಲಿ ಹೆಚ್ಚುವ ಸಾಧ್ಯತೆ ಇದೆ" ಎಂದು ಐಎಂಡಿ ಮಹಾ ನಿರ್ದೇಶಕ ಎಂ.ಮೊಹಾಪಾತ್ರ ಹೇಳಿದ್ದಾರೆ.
ವ್ಯಾಪಕ ಮಳೆಯಿಂದಾಗಿ ತಗ್ಗು ಪ್ರದೇಶಗಳು ಮುಳುಗುವ ಸಾಧ್ಯತೆ ಇದೆ. ಒಡಿಶಾದಲ್ಲಿ ನೆರೆಹಾವಳಿಯ ಮುನ್ನೆಚ್ಚರಿಕೆ ನೀಡಲಾಗಿದೆ. ನದಿ ಪ್ರವಾಹ ಸಂಬಂಧ ಕೇಂದ್ರೀಯ ಜಲ ಆಯೋಗ ಎಚ್ಚರಿಕೆ ನೀಡಲಿದೆ. ಸ್ಥಳೀಯ ಜನರು ಭಾರಿ ಮಳೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಲ್ಲೂ ವ್ಯಾಪಕ ಮಳೆಯಾಗಲಿದ್ದು, ಚಂಡಮಾರುತ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಗುಜರಾತ್ ಮೂಲಕ ಹಾದುಹೋಗುವ ನಿರೀಕ್ಷೆ ಇದೆ ಎಂದು ಹೇಳಿದೆ.