ಕಲ್ಲಿಕೋಟೆ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಲಯಾಳಂ ಲೇಖಕ ಸಿವಿಕ್ ಚಂದ್ರನ್‌ಗೆ ಕೋಝಿಕ್ಕೋಡ್‌ನ ಸೆಶನ್ಸ್ ನ್ಯಾಯಾಲಯದ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಬೇಕೆಂದು ಕೋರಿ ಕೇರಳ ಸರಕಾರವು ಹೈಕೋರ್ಟ್ ಮೆಟ್ಟಲೇರಿದೆ.
ಮಹಿಳೆಯು ಲೈಂಗಿಕವಾಗಿ ಪ್ರಚೋದನಕಾರಿಯಾದ ಉಡುಪುಗಳನ್ನು ಧರಿಸಿದ್ದಲ್ಲಿ ಆಗ, ಮಹಿಳೆಯ ಗೌರವಕ್ಕೆ ಧಕ್ಕೆಯುಂಟು ಮಾಡಿದ ಕಾನೂನು ಅನ್ವಯವಾಗುವುದಿಲ್ಲವೆಂದು ಪ್ರತಿಪಾದಿಸಿದ ಕೋಝಿಕ್ಕೋಡ್ ಸೆಶನ್ಸ್ ನ್ಯಾಯಾಧೀಶ ಎಸ್.ಕೃಷ್ಣಕುಮಾರ್ ಅವರು ಚಂದ್ರನ್‌ಗೆ ಜಾಮೀನು ಬಿಡುಗಡೆ ನೀಡಿದ್ದರು..
ಅಂಗವಿಕಲರಾದ 74 ವರ್ಷ ವಯಸ್ಸಿನ ಸಿವಿಕ್ ಚಂದ್ರನ್ ಮಹಿಳೆಯನ್ನು ಬಲವಂತವಾಗಿ ತನ್ನ ಎಳೆದು, ತನ್ನ ತೊಡೆಯಲ್ಲಿ ಕುಳ್ಳಿರಿಸಿ, ಆಕೆಯ ಸ್ತನಗಳನ್ನು ಲೈಂಗಿಕ ಉದ್ದೇಶದಿಂದ ಅದುಮಿದ್ದಾರೆಂಬ ಆರೋಪವನ್ನು ನಂಬುವುದು ಅಸಾಧ್ಯವೆಂದು ಸೆಶನ್ಸ್ ನ್ಯಾಯಾಧೀಶರು ಅಭಿಪ್ರಾಯಿಸಿದ್ದರು.
ಕೋಝಿಕ್ಕೋಡ್ ಸೆಶನ್ಸ್ ನ್ಯಾಯಾಲಯದ ಈ ಅನಿಸಿಕೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ನ್ಯಾಯಾಧೀಶರ ಇಂತಹ ಅಭಿಪ್ರಾಯಗಳಿಂದ ಉಂಟಾಗುವ ದೂರಗಾಮಿ ಪರಿಣಾಮಗಳನ್ನು ನ್ಯಾಯಾಲಯವು ಕಡೆಗಣಿಸಿದೆಯೆಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ತಿಳಿಸಿದ್ದಾರೆ.
ಈ ಆದೇಶವು ಅಕ್ರಮ, ಅನ್ಯಾಯಯುತವಾದುದು ಹಾಗೂ ದೂರುದಾರನಿಗೆ ಮಾನಸಿಕ ಯಾತನೆಯನ್ನುಂಟು ಮಾಡಿದೆ ಎಂದು ಕೇರಳ ಸರಕಾರವು ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದೆ.
ಸೆಶನ್ಸ್ ನ್ಯಾಯಾಲಯವು ವ್ಯಕ್ತಪಡಿಸಿರುವ ಅಭಿಪ್ರಾಯಗಳು, ಅತ್ಯಂತ ಖಂಡನೀಯವಾದುದು, ನಿಂದನಾತ್ಮಕವಾದುದು ಹಾಗೂ ಮಹಿಳಾ ವಿರೋಧಿಯಾಗಿದೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನತೆಯಿಟ್ಟಿರುವ ವಿಶ್ವಾಸಕ್ಕೆ ಹಾನಿಯುಂಟು ಮಾಡಲಿದೆ'' ಅರ್ಜಿಯು ಹೇಳಿದೆ.
ಸೆಶನ್ಸ್ ನ್ಯಾಯಾಧೀಶರು ನೀಡಿದ ಈ ಆದೇಶವು ಅವರ ಅಧಿಕಾರ ಹಾಗೂ ಕಾರ್ಯವ್ಯಾಪ್ತಿಯನ್ನು ಮೀರಿದ್ದಾಗಿದೆಯೆಂದು ರಾಜ್ಯ ಸರಕಾರವು ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ದಾಖಲೆಯಿಂದ ತೆಗೆದುಹಾಕಬೇಕೆಂದು ಹೈಕೋರ್ಟನ್ನು ಕೇರಳ ಸರಕಾರ ಅರ್ಜಿಯಲ್ಲಿ ಆಗ್ರಹಿಸಿದೆ.