ಮುಂಬೈ: ಭಾರತದ ಕೋಟ್ಯಧಿಪತಿ, 'ಆಕಾಸಾ ಏರ್'ವಿಮಾನಯಾನ ಕಂಪನಿ ಸ್ಥಾಪಕ, ಷೇರುಪೇಟೆಯ ಹೂಡಿಕೆದಾರ ರಾಕೇಶ್ ಜುಂಝನ್‌ವಾಲಾ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
'ರಾಕೇಶ್ ಜುಂಝನ್‌ವಾಲಾ ಅವರು ಅದಮ್ಯ ವ್ಯಕ್ತಿ. ಅವರ ಸಂಪೂರ್ಣ ಬದುಕು ವಿನೋದ ಮತ್ತು ಗಾಂಭೀರ್ಯತೆ ಕೂಡಿದ್ದು, ಆರ್ಥಿಕ ವಲಯಕ್ಕೆ ಅಳಿಸಲಾಗದ ಕೊಡುಗೆಯನ್ನು ಕೊಟ್ಟು ಹೋಗಿದ್ದಾರೆ. ಭಾರತದ ಪ್ರಗತಿಗೆ ಸದಾ ದೃಢ ಸಂಕಲ್ಪ ಹೊಂದಿದ್ದರು . ಅವರ ಅಗಲಿಕೆ ಬೇಸರವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ಮತ್ತು ಹಿತೈಷಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ' ಎಂದಿದ್ದಾರೆ.
ಭಾರತದ ವಾರೆನ್ ಬಫೆಟ್ ಎಂದೇ ಪ್ರಸಿದ್ಧರಾಗಿದ್ದ ಜುಂಝನ್‌ವಾಲಾ ಅವರು ಭಾರತೀಯ ಮಾರುಕಟ್ಟೆಗಳಲ್ಲಿ ಬಿಗ್ ಬುಲ್ ಎಂದೂ ಕರೆಯಿಸಿಕೊಳ್ಳುತ್ತಿದ್ದರು. ಫೋರ್ಬ್ಸ್ ಪ್ರಕಾರ ಜುಂಝನ್‌ವಾಲಾ ಅವರ ಆಸ್ತಿಯ ಮೌಲ್ಯ ಸುಮಾರು ₹ 46 ಸಾವಿರ ಕೋಟಿ.
1985ರಲ್ಲಿ ಜುಂಝನ್‌ವಾಲಾ ಅವರು ಕಾಲೇಜು ದಿನಗಳಲ್ಲಿ ಕೇವಲ ₹ 5 ಸಾವಿರ ಬಂಡವಾಳವನ್ನು ಹೂಡುವ ಮೂಲಕ ಷೇರುಪೇಟೆಯ ಪ್ರಯಾಣವನ್ನು ಆರಂಭಿಸಿದ್ದರು. 2018ರ ವೇಳೆಗೆ ಜುಂಝನ್‌ವಾಲಾ ಅವರ ಬಂಡವಾಳವು ₹ 11 ಸಾವಿರ ಕೋಟಿಗೆ ಹಿಗ್ಗಿತ್ತು. ಪ್ರಸ್ತುತ ರಾಷ್ಟ್ರದ 48ನೇ ಶ್ರೀಮಂತ ವ್ಯಕ್ತಿ ಎಂದೆನಿಸಿಕೊಂಡಿದ್ದರು.
ಜೆಟ್ ಏರ್‌ವೇಸ್ ಮಾಜಿ ಸಿಇಒ ವಿನಯ್ ದುಬೆ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆ ಮಾಜಿ ಮುಖ್ಯಸ್ಥ ಆದಿತ್ಯ ಘೋಷ್ ಅವರ ಜೊತೆ ಸೇರಿ ಆಕಾಸಾ ಏರ್ ಆರಂಭಿಸಿದ್ದರು.
ಇದೇ ಆಗಸ್ಟ್ 7ರಂದು, ಆಕಾಸಾ ಏರ್ ವಿಮಾನಯಾನ ಕಂಪನಿಯ ಮೊದಲ ಸೇವೆಯು ಮುಂಬೈ-ಅಹಮದಾಬಾದ್ ನಡುವೆ ಆರಂಭವಾಗಿತ್ತು. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಿಮಾನ ಸೇವೆಗೆ ವರ್ಚುವಲ್ ಆಗಿ ಚಾಲನೆ ನೀಡಿದ್ದರು.