ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೆಟಿವ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯನ್ನು ಚೀನಾ ಖಂಡಿಸಿದ್ದು, 'ಇದು ಅತ್ಯಂತ ಅಪಾಯಕಾರಿ' ಎಂದು ಹೇಳಿದೆ. ಅಮೆರಿಕದ ಉನ್ನತ ರಾಜಕೀಯ ಹುದ್ದೆಯಲ್ಲಿ ಇರುವ ವ್ಯಕ್ತಿಯೊಬ್ಬರು ಕಳೆದ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತೈವಾನ್ಗೆ ಭೇಟಿ ನೀಡಿದ್ದಾರೆ. ತೈವಾನ್ ತನ್ನಿಂದ ಬೇರ್ಪಟ್ಟ ಪ್ರಾಂತ್ಯವಾಗಿದ್ದು, ಅದು ಅಂತಿಮಈವಾಗಿ ತನ್ನ ನಿಯಂತ್ರಣದಲ್ಲಿ ಇರಬೇಕೆಂದು ಚೀನಾ ಪ್ರತಿಪಾದಿಸುತ್ತಿದೆ. ಆದರೆ, ತೈವಾನ್ ತನ್ನನ್ನು ಸ್ವಂತ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತ ನಾಯಕರನ್ನು ಹೊಂದಿರುವ ಸ್ವತಂತ್ರ ದೇಶ ಎಂದು ಘೋಷಿಸಿಕೊಂಡಿದೆ. 'ಏಕ ಚೀನಾ' ನೀತಿ ಪ್ರತಿಪಾದಿಸುವ ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಚೀನಾದೊಂದಿಗೆ ತೈವಾನ್ನ ಪುನರ್ಏಕೀಕರಣ ಈಡೇರಲೇಬೇಕು ಎಂದು ಹೇಳುತ್ತಿದ್ದಾರೆ. ಅಲ್ಲದೆ, ಇದನ್ನು ಸಾಧಿಸಲು ಸೇನಾಬಲ ಬಳಕೆಯ ಸಾಧ್ಯತೆಯನ್ನೂ ಅವರು ತಳ್ಳಿಹಾಕಿಲ್ಲ.
ಅಮೆರಿಕಕ್ಕೆ ಎಚ್ಚರಿಕೆ: ನ್ಯಾನ್ಸಿ ಪೆಲೋಸಿ ಅವರ ಭೇಟಿಯ ಪ್ರತೀಕಾರವಾಗಿ ತೈವಾನ್ನಿಂದ ಕಿತ್ತಳೆ ಹಣ್ಣು, ಮೀನು ಮತ್ತು ಇತರ ಆಹಾರ ಪದಾರ್ಥಗಳ ಆಮದನ್ನು ಚೀನಾ ನಿರ್ಬಂಧಿಸಿದೆ. ಅಲ್ಲದೆ, ತನ್ನ ದೇಶದಿಂದ ಮರಳು ರಫ್ತು ಮಾಡುವುದನ್ನು ಸ್ಥಗಿತಗೊಳಿಸಿದೆ. ಅಮೆರಿಕವು ತನ್ನ ತಪುಪಗಳಿಗೆ ಬೆಲೆ ನೀಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಚೀನಾ ನೀಡಿದೆ. ಇದೇ ವೇಳೆ ಪೆಲೋಸಿ ಅವರು ತೈವಾನ್ನ ಪ್ರಜಾಪ್ರಭುತ್ವವನ್ನು ಶ್ಲಾಘಿಸಿದ್ದಾರೆ. ಮಂಗಳವಾರ ತೈವಾನ್ಗೆ ಆಗಮಿಸಿದ್ದ ನ್ಯಾನ್ಸಿ ಪೆಲೋಸಿ ಅವರು ಬುಧವಾರ ಅಮೆರಿಕಕ್ಕೆ ವಾಪಸಾದರು. ಈ ಭೇಟಿಯಲ್ಲಿ ಪೆಲೋಸಿ ಅವರು ತೈವಾನ್ನ ಪ್ರಜಾಪ್ರಭುತ್ವವನ್ನು ಶ್ಲಾಘಿಸಿದ್ದು ಮಹತ್ವದ ಅಂಶವಾಗಿದೆ. ತೈವಾನ್ನ ಸ್ವಯಂ ಆಡಳಿತಕ್ಕೆ ಅಮೆರಿಕದ ಬದ್ಧತೆಯನ್ನು ಅವರು ಖಚಿತಪಡಿಸಿದ್ದು ಗಮನಾರ್ಹವಾಗಿದೆ. ತಮ್ಮ ಭೇಟಿಯಲ್ಲಿ ಅವರು ತೈವಾನಿನ ಸಂಸದರೊಂದಿಗೆ ಮಾತುಕತೆ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕವು ಯಥಾಸ್ಥಿತಿಯನ್ನು ಬೆಂಬಲಿಸುತ್ತದೆ. ಆದರೆ, ಬಲವಂತವಾಗಿ ತೈವಾನ್ಗೆ ಏನಾದರೂ ಮಾಡುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದರು. ಎಂದಿಗಿಂತಲೂ ಹೆಚ್ಚಾಗಿ ಈಗ ತೈವಾನ್ ಜತೆ ಅಮೆರಿಕದ ಐಕ್ಯಮತ ಹೊಂದಿರುವುದು ನಿರ್ಣಾಯಕ ಸಂಗತಿಯಾಗಿದೆ. ನಾವು ತಂದ ಸಂದೇಶ ಇದೇ ಆಗಿದೆ ಎಂದು ಪೆಲೋಸಿ ಹೇಳಿದ್ದಾರೆ ಎಂದು ತೈವಾನ್ ಅಧ್ಯಕ್ಷೆ ತ್ಸೈಇಂಗ್-ವೆನ್ ತಿಳಿಸಿದ್ದಾರೆ. ಏತನ್ಮಧ್ಯೆ, ಚೀನಾವು ಈ ಭೇಟಿ ವಿರೋಧಿಸಿ ಬೀಜಿಂಗ್ನಲ್ಲಿರುವ ಅಮೆರಿಕದ ರಾಯಭಾರಿಯನ್ನು ಕರೆಸಿಕೊಂಡು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿತು. ಅಮೆರಿಕವು ತನ್ನ ತಪ್ಪುಗಳಿಗೆ ಬೆಲೆ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿತು. ತನ್ನನ್ನು ನಿಯಂತ್ರಿಸಲು ತೈವಾನ್ ಸಮಸ್ಯೆ ಬಳಸುವುದನ್ನು ಅಮೆರಿಕ ನಿಲ್ಲಿಸಬೇಕೆಂದೂ ಚೀನಾ ಹೇಳಿದೆ.
ಪ್ರತ್ಯೇಕ ರಾಷ್ಟ್ರವೇ? ಡ್ರ್ಯಾಗನ್ನ ಭಾಗವೇ?17ನೇ ಶತಮಾನದಲ್ಲಿ ಕ್ವಿಂಗ್ ರಾಜವಂಶವು ಆಡಳಿತವನ್ನು ಪ್ರಾರಂಭಿಸಿದಾಗ ತೈವಾನ್ ಸಂಪೂರ್ಣವಾಗಿ ಚೀನಾದ ನಿಯಂತ್ರಣಕ್ಕೆ ಒಳಪಟ್ಟಿತು ಎಂದು ಇತಿಹಾಸ ಹೇಳುತ್ತದೆ. ನಂತರ, 1895ರಲ್ಲಿ ಪ್ರಥಮ ಚೀನಾ- ಜಪಾನ್ ಯುದ್ಧದಲ್ಲಿ ಸೋಲನುಭವಿಸಿದ ನಂತರ ಈ ದ್ವೀಪವನ್ನು ಚೀನಿಯರು ಜಪಾನ್ಗೆ ಬಿಟ್ಟುಕೊಟ್ಟರು. ಎರಡನೇ ಮಹಾಯುದ್ಧದಲ್ಲಿ ಜಪಾನ್ ಸೋತ ನಂತರ 1945ರಲ್ಲಿ ಚೀನಾ ಮತ್ತೆ ಈ ದ್ವೀಪವನ್ನು ವಶಪಡಿಸಿಕೊಂಡಿತು. ಆದರೆ, ಚಿಯಾಂಗ್ ಕೈ-ಶೇಕ್ ನೇತೃತ್ವದ ರಾಷ್ಟ್ರೀಯವಾದಿ ಸರ್ಕಾರಿ ಪಡೆಗಳು ಮತ್ತು ಮಾವೋ ಝೆಡಾಂಗ್ರ ಕಮ್ಯುನಿಸ್ಟ್ ಪಕ್ಷದ ನಡುವೆ ಚೀನಾದ ಮುಖ್ಯ ಭೂಭಾಗದಲ್ಲಿ ಅಂತರ್ಯುದ್ಧವು ಭುಗಿಲೆದ್ದಿತು. 1949ರಲ್ಲಿ ಕಮ್ಯುನಿಸ್ಟರು ಗೆದ್ದು, ಬೀಜಿಂಗ್ನಲ್ಲಿ ಹಿಡಿತ ಸಾಧಿಸಿದರು. ಚಿಯಾಂಗ್ ಕೈ-ಶೇಕ್ ಮತ್ತು ರಾಷ್ಟ್ರೀಯವಾದಿ ಪಕ್ಷದಲ್ಲಿ ಉಳಿದಿದ್ದವರನ್ನು ಕ್ಯುಮಿಂಟಾಂಗ್ ಎಂದು ಕರೆಯುತ್ತಾರೆ. ಇವರೆಲ್ಲ ತೈವಾನ್ಗೆ ಪಲಾಯನ ಕೈಗೊಂಡು, ಅಲ್ಲಿ ಹಲವಾರು ದಶಕಗಳವರೆಗೆ ಆಡಳಿತ ನಡೆಸಿದರು. ತೈವಾನ್ ಮೂಲತಃ ತನ್ನ ಪ್ರಾಂತ್ಯ ಎನ್ನಲು ಚೀನಾ ಈ ಇತಿಹಾಸವನ್ನು ಸೂಚಿಸುತ್ತದೆ. ಆದರೆ, ಇದೇ ಇತಿಹಾಸವನ್ನು ಎತ್ತಿ ತೋರಿಸುವ ತೈವಾನೀಯರು, 1911ರಲ್ಲಿ ಕ್ರಾಂತಿಯ ನಂತರ ಮೊದಲ ಬಾರಿಗೆ ರೂಪುಗೊಂಡ ಆಧುನಿಕ ಚೀನಿ ರಾಷ್ಟ್ರದ ಭಾಗವಾಗಿ ತೈವಾನ್ ಇರಲಿಲ್ಲ. ಅಲ್ಲದೆ, 1949ರಲ್ಲಿ ಮಾವೋ ನೇತೃತ್ವದಲ್ಲಿ ಸ್ಥಾಪಿತವಾದ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವೂ ಆಗಿರಲಿಲ್ಲ ಎಂಬ ವಾದ ಮುಂದಿಡುತ್ತಾರೆ. ತೈವಾನ್ನ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಕ್ಯುಮಿಂಟಾಂಗ್ ಒಂದಾಗಿದ್ದು, ದೀರ್ಘಕಾಲ ಈ ದ್ವೀಪದಲ್ಲಿ ಆಡಳಿತ ನಡೆಸಿದೆ. ಪ್ರಸ್ತುತ, ಕೇವಲ 13 ದೇಶಗಳು (ಜೊತೆಗೆ ವ್ಯಾಟಿಕನ್) ತೈವಾನ್ ಅನ್ನು ಸಾರ್ವಭೌಮ ರಾಷ್ಟ್ರವೆಂದು ಗುರುತಿಸುತ್ತವೆ. ಅಮೆರಿಕ ಹಾಗೂ ಭಾರತ ಈ 13 ದೇಶಗಳ ಪಟ್ಟಿಯಲ್ಲಿಲ್ಲ. ತೈವಾನನ್ನು ಪ್ರತ್ಯೇಕ ರಾಷ್ಟ್ರ ಎಂದು ಗುರುತಿಸದಂತೆ ಅಥವಾ ಗುರುತಿಸುವುದನ್ನು ಸೂಚಿಸುವ ಯಾವುದನ್ನೂ ಮಾಡದಂತೆ ಚೀನಾ ಇತರ ದೇಶಗಳ ಮೇಲೆ ರಾಜತಾಂತ್ರಿಕ ಒತ್ತಡ ಹೇರುತ್ತ ಬಂದಿದೆ.
ಬದಲಾಗುತ್ತಿದೆಯೇ ಅಮೆರಿಕದ ನಿಲುವು?: ಒಂದು ವೇಳೆ ತೈವಾನ್ ಮೇಲೆ ಚೀನಾ ದಾಳಿ ನಡೆಸಿದರೆ ಅಮೆರಿಕವು ತೈವಾನ್ ರಕ್ಷಣೆಗೆ ಮುಂದಾಗುತ್ತದೆಯೋ ಅಥವಾ ಇಲ್ಲವೋ ಎಂಬುದು ಅಸ್ಪಷ್ಟವಾಗಿದೆ. ರಾಜತಾಂತ್ರಿಕವಾಗಿ ಅಮೆರಿಕವು 'ಏಕ ಚೀನಾ' ನೀತಿಯನ್ನು ಬೆಂಬಲಿಸುತ್ತ ಬಂದಿದೆ. ತೈವಾನ್ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಚೀನಾದೊಂದಿಗೆ ಔಪಚಾರಿಕ ಸಂಬಂಧವನ್ನು ಹೊಂದಿದೆ. ಆದರೆ, ಕಳೆದ ಮೇ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ತೈವಾನ್ ಪರವಾಗಿ ಒಲವು ವ್ಯಕ್ತಪಡಿಸಿದ್ದಾರೆ. ತೈವಾನ್ಗೆ ಮಿಲಿಟರಿ ರಕ್ಷಣೆಯನ್ನು ಅಮೆರಿಕದ ಒದಗಿಸುತ್ತದೆಯೇ ಎಂಬ ಪ್ರಶ್ನೆಗೆ, 'ಹೌದು' ಎಂದು ಉತ್ತರಿಸಿದ್ದಾರೆ.
ಎಲ್ಲಿದೆ ಈ ದ್ವೀಪ ಪ್ರದೇಶ?: ಆಗ್ನೇಯ ಚೀನಾದ ಕರಾವಳಿಯಿಂದ ಸರಿಸುಮಾರು 100 ಮೈಲುಗಳಷ್ಟು ದೂರದಲ್ಲಿರುವ ಒಂದು ದ್ವೀಪ ತೈವಾನ್. ಹಲವಾರು ಅಮೆರಿಕಸ್ನೇಹಿ ಪ್ರದೇಶಗಳನ್ನು ಒಳಗೊಂಡಿರುವ 'ಮೊದಲ ದ್ವೀಪ ಸರಪಳಿ'ಯ ನಡುವೆ ತೈವಾನ್ ಇದೆ. ಈ ದ್ವೀಪ ಸರಪಳಿಯು ಅಮೆರಿಕದ ವಿದೇಶಾಂಗ ನೀತಿ ದೃಷ್ಟಿಯಿಂದ ಆಯಕಟ್ಟಿನ ಪ್ರದೇಶವಾಗಿದೆ. ತೈವಾನನ್ನು ಸ್ವಾಧೀನಪಡಿಸಿಕೊಂಡರೆ, ಪಶ್ಚಿಮ ಪೆಸಿಫಿಕ್ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ಚೀನಾಕ್ಕೆ ಅನುಕೂಲವಾಗುತ್ತದೆ.
ಮಿಲಿಟರಿ ಬಲಾಬಲ: ಆರ್ಥಿಕ ಸಂಬಂಧಗಳನ್ನು ಬಲಪಡಿಸುವಂತಹ ಮಿಲಿಟರಿಯೇತರ ವಿಧಾನಗಳಿಂದ ಪುನರ್ಏಕೀಕರಣ ತರಲು ಚೀನಾ ಪ್ರಯತ್ನಿಸುವ ಸಾಧ್ಯತೆ ಕಂಡುಬರುತ್ತದೆ. ಒಂದು ವೇಳೆ ಮಿಲಿಟರಿಯಲ್ಲಿ ಮುಖಾಮುಖಿಯಾದರೆ, ಚೀನಾದ ಸಶಸ್ತ್ರ ಪಡೆಗಳ ಮುಂದೆ ತೈವಾನ್ನ ಪಡೆಗಳ ಸಾಮರ್ಥ್ಯ ತೀರ ಕ್ಷೀಣ. ಅಮೆರಿಕವನ್ನು ಹೊರತುಪಡಿಸಿ ಜಗತ್ತಿನ ಉಳಿದೆಲ್ಲ ರಾಷ್ಟ್ರಗಳಿಗಿಂತ ಹೆಚ್ಚಿನ ಹಣವನ್ನು ಚೀನಾ ರಕ್ಷಣೆಗಾಗಿ ಖರ್ಚು ಮಾಡುತ್ತದೆ ಎಂಬುದು ಗಮನಾರ್ಹ.
ತಲಾದಾಯದಲ್ಲಿ ಮುಂದೆ: ತೈವಾನ್ನ ಜನಸಂಖ್ಯೆ ಅಂದಾಜು 2 ಕೋಟಿ 40 ಲಕ್ಷ. ಜಗತ್ತಿನಲ್ಲಿಯೇ ಅತಿಹೆಚ್ಚು ಜನಸಾಂದ್ರತೆ ಇರುವ ದೇಶಗಳಲ್ಲಿ ಒಂದಾಗಿದೆ. ಆರ್ಥಿಕವಾಗಿ ಮುಂದುವರಿದ ದೇಶ ಎಂದೇ ಗುರುತಿಸಲಾಗುತ್ತದೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕೈಗಾರಿಕೆಯಲ್ಲಿ ಮುಂಚೂಣಿ ಯಲ್ಲಿದೆ. ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಹೆಚ್ಚಾಗಿ ರಫ್ತು ಮಾಡುತ್ತದೆ. ಚೀನಾದ ಜನಸಂಖ್ಯೆಯು ತೈವಾನ್ಗಿಂತ 58 ಪಟ್ಟು ಹೆಚ್ಚಾಗಿದೆ. ಆದರೆ, ಒಟ್ಟು ದೇಶಿಯ ಉತ್ಪನ್ನವು (ಜಿಡಿಪಿ) ತೈವಾನ್ಗಿಂತ 10 ಪಟ್ಟು ಮಾತ್ರ ಇದೆ. ತಲಾ ದಾಯದಲ್ಲಿ ತೈವಾನ್ ಮುಂಚೂಣಿ ರಾಷ್ಟ್ರಗಳ ಪಟ್ಟಿಗೆ ಸೇರುತ್ತದೆ.