ನಮ್ಮ ಸ್ವಾತಂತ್ರ್ಯ ಸೇನಾನಿಗಳು, ನೇತಾರರ ತ್ಯಾಗ, ನೋವು, ಸಂಘರ್ಷ, ರಕ್ತ, ಬೆವರುಗಳೇ ಇದಕ್ಕೆ ಕಾರಣ. ಈ ಸುದೀರ್ಘ ಹೋರಾಟದ ಚಿತ್ರಣ ಕಟ್ಟಿಕೊಡುವುದು ಸುಲಭವಲ್ಲ. ಕೆಲ ಪ್ರಮುಖ ಘಟನಾವಳಿಗಳನ್ನು ಇಲ್ಲಿ ದಾಖಲಿಸಲಾಗಿದೆ.
ಬ್ರಿಟಿಷ್ ಆಡಳಿತದ ದಬ್ಬಾಳಿಕೆಯಿಂದ ಬೇಸತ್ತು ಸ್ವತಂತ್ರ ಬದುಕನ್ನು ಬಯಸಿ ಭಾರತೀಯರು ನಡೆಸಿದ ಸುಮಾರು ನೂರು ವರ್ಷಗಳ ನಿರಂತರ ಸಂಘರ್ಷ, ಹೋರಾಟ, ಚಳವಳಿಗಳೇ ಭಾರತದ ಸ್ವಾತಂತ್ರ್ಯ ಸಂಗ್ರಾಮವೆಂದು ಹೇಳಬಹುದು. 1820 ರ ದಶಕದಲ್ಲಿಯೇ ಆಂಗ್ಲರನ್ನು ನಡುಗಿಸಿದ್ದ ಕರ್ನಾಟಕದ ವೀರರಾಣಿ ಕಿತ್ತೂರು ಚನ್ನಮ್ಮ ಸ್ವಾತಂತ್ರ್ಯ್ಕಾಗಿ ಸೆಣಸಾಡಿದ ಮೊದಲ ಮಹಿಳೆ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ಸ್ವಧರ್ಮ, ಸ್ವದೇಶಿ, ಸ್ವರಾಜ್ಯ ಎಂಬ ಮೂರು ಬಲವಾದ ತತ್ವಗಳ ಬುನಾದಿ ಹೊಂದಿತ್ತು. ಅಂದಿನಿಂದ 1947ರ ಆಗಸ್ಟ್ 15ರವರೆಗಿನ ಅವಧಿಯಲ್ಲಿ ಸಾವಿರಾರು ಕ್ರಾಂತಿಕಾರಿಗಳು, ಕ್ರಾಂತಿಕಾರ್ಯಗಳು ದೇಶದಲ್ಲಿ ಸಿಡಿದೆದ್ದು ಪ್ರತಿಧ್ವನಿಸಿದವು. ಈ ಮಹಾ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದವರು ಸರಿಸುಮಾರು 3 ಲಕ್ಷ ಜನ.
ಸಂಗ್ರಾಮದ ಕಿಡಿ
ಬಾಲ ಗಂಗಾಧರ ತಿಲಕ್
1757ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಭಾರತದ ಆಡಳಿತವನ್ನು ಕೈಗೆ ತೆಗೆದುಕೊಂಡು ಸರಿಯಾಗಿ 100 ವರ್ಷಗಳ ನಂತರ 1857 ರಲ್ಲಿ ಮೀರತ್ನಲ್ಲಿ ಸಿಪಾಯಿ ದಂಗೆ ಅಥವಾ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಡಿಯೆದ್ದಿತು. ಸಿಪಾಯಿ ದಂಗೆಗೆ ಮುಖ್ಯ ಕಾರಣವೆಂದರೆ, ಭಾರತೀಯ ಸೈನಿಕರಿಗೆ ಕೊಡುವ ಬಂದೂಕಿನ ನಳಿಕೆಗೆ ಆಕಳ ಕೊಬ್ಬು ಮತ್ತು ಹಂದಿಯ ಕೊಬ್ಬು ಸವರಿದ್ದಾರೆ ಎನ್ನುವ ಸುದ್ದಿ ಹರಡಿದ್ದು. ಭಾರತೀಯ ಸೈನಿಕರು ಅದನ್ನು ಹಲ್ಲಿನಿಂದ ಕಚ್ಚಿ ತೆಗೆಯಬೇಕಿತ್ತು. ಇದು ಹಿಂದೂ-ಮುಸ್ಲಿಂರ ಧಾರ್ವಿುಕ ಭಾವನೆಗಳಿಗೆ ಧಕ್ಕೆ ತರುವಂಥದಾದ್ದರಿಂದ ಆ ಬಂದೂಕುಗಳನ್ನು ಉಪಯೋಗಿಸಲು ಸೈನಿಕರು ನಿರಾಕರಿಸಿದ್ದಲ್ಲದೆ ಈ ಧಾರ್ವಿುಕ ಕಿಚ್ಚು ಭುಗಿಲೆದ್ದು ಮಂಗಲ ಪಾಂಡೆ ಎಂಬ ಸಿಪಾಯಿ ಬ್ರಿಟಿಷ್ ಸಾರ್ಜೆಂಟ್ಗಳ ಮೇಲೆ ದಾಳಿ ಮಾಡಿದ. ಆತನನ್ನು ಗಲ್ಲಿಗೇರಿಸಲಾಯಿತು.
1857ರ ಯುದ್ಧವು ಆಧುನಿಕ ಭಾರತದ ಇತಿಹಾಸದಲ್ಲಿ ಒಂದು ಮುಖ್ಯ ತಿರುವಾಗಿತ್ತು. ತದನಂತರ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ಕೊನೆಗೊಂಡು ನೇರ ಬ್ರಿಟನ್ನಿನ ರಾಜ ಮನೆತನದ ಚಕ್ರಾಧಿಪತ್ಯದಡಿಗೆ ಭಾರತವನ್ನು ತರಲಾಯಿತು. ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶ್ರೀ ಅರಬಿಂದೋ ಮುಂತಾದವರು ಸಂಪೂರ್ಣ ಸ್ವಾತಂತ್ರ್ಯ ಕನಸನ್ನು ಶ್ರೀಸಾಮಾನ್ಯರಲ್ಲಿ ಬಿತ್ತಿದರು. ಇನ್ನೊಂದೆಡೆ, ಸಾಹಿತಿಗಳು ದೇಶಭಕ್ತಿಪೂರಿತವಾದ ಸಾಹಿತ್ಯದ ಮೂಲಕ ಜನರನ್ನು ಭಾವನಾತ್ಮಕವಾಗಿ ಹುರಿದುಂಬಿಸತೊಡಗಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ
1885ರಲ್ಲಿ ಕೆಲ ಭಾರತೀಯ ನಾಯಕರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಉದಯವಾಯಿತು.1890ರ ಹೊತ್ತಿಗೆ ಭಾರತೀಯ ಕಾಂಗ್ರೆಸ್ನ್ನು ಸೇರಿದ ಬಾಲಗಂಗಾಧರ ತಿಲಕ್ ರಂತಹವರು ತೀವ್ರವಾದಿಗಳಾಗಿದ್ದರೂ ದೇಶಾಭಿಮಾನದ ದಿಟ್ಟ ನಡೆಯಿಂದಾಗಿ ಜನಾನುರಾಗ ಗಳಿಸಿದರು. ಅವರ 'ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು; ನಾನು ಅದನ್ನು ಪಡೆದೇ ತೀರುವೆನು' ಎಂಬ ವಾಣಿ ಭಾರತೀಯರಿಗೆ ಸ್ಪೂರ್ತಿಯಾಯಿತು. ಸೌಮ್ಯವಾದಿಗಳಾದ ಗೋಪಾಲಕೃಷ್ಣ ಗೋಖಲೆ ಮತ್ತು ದಾದಾಭಾಯ್ ನವರೋಜಿ ಮುಂತಾದವರು ಮಾತುಕತೆ ಮತ್ತು ಶಾಂತಿಮಾರ್ಗವನ್ನು ಬೆಂಬಲಿಸುತ್ತಿದ್ದರು. ಹೀಗೆ ಕಾಂಗ್ರೆಸ್ನಲ್ಲಿ ಎರಡು ಬಣಗಳಾದವು. ಈ ನಡುವೆ ಸರ್ ಅಹಮದ್ ಸಯ್ಯದ್ ಅವರು ಮುಸಿಮರ ಪುನರುಜ್ಜೀವನಕ್ಕಾಗಿ ಚಳವಳಿ ಪ್ರಾರಂಭಿಸಿದರು. ಮುಂದೆ 1909 ರಲ್ಲಿ ಮುಸ್ಲಿಂ ಲೀಗ್ ಅನ್ನು ಸ್ಥಾಪಿಸಲಾಯಿತು.
ವಂಗಭಂಗ ಚಳವಳಿ
1905ರಲ್ಲಿ ವೈಸರಾಯ್ ಲಾರ್ಡ್ ಕಝುನ್ ಆಡಳಿತಾತ್ಮಕ ಸುಧಾರಣೆಯ ನೆಪದಿಂದ ಬಂಗಾಳ ಪ್ರಾಂತ್ಯವನ್ನು ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಎಂದು ಎರಡು ಭಾಗಗಳಾಗಿ ವಿಂಗಡಿಸಿದ. ವಂಗದೇಶವು ಭಂಗವಾದದ್ದು ಬಂಗಾಳದ ಜನರನ್ನು ರೊಚ್ಚಿಗೆಬ್ಬಿಸಿತು. ಜನ ಬೀದಿಗಿಳಿದು ಪ್ರತಿಭಟಿಸಿದರು. ಕಾಂಗ್ರೆಸ್ ಸ್ವದೇಶಿ ಕೂಗೆಬ್ಬಿಸಿ ವಿದೇಶಿ ಪದಾರ್ಥಗಳಿಗೆ ನಿರ್ಬಂಧ ಘೊಷಿಸಿತು. ಜನ ಸಮುದಾಯದಲ್ಲಿ ಸ್ವದೇಶಿ ಅಭಿಮಾನ ಜಾಗೃತವಾಯಿತು. ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಇಂಗ್ಲಿಷ್ ಸರ್ಕಾರ ವಂಗ ಭಂಗವನ್ನು ಅನೂರ್ಜಿತಗೊಳಿಸಿ, ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಯ ದಕ್ಷಿಣ ಭಾಗಕ್ಕೆ ವರ್ಗಾಯಿಸಿತು. ಅದೇ ಈಗಿನ ನವದೆಹಲಿ.
ರೌಲತ್ ಕಾಯ್ದೆ ಎಡವಟ್ಟು
ಈ ನಡುವೆ 1913ರಲ್ಲಿ ಮೊದಲನೆಯ ಮಹಾಯುದ್ಧ ಪ್ರಾರಂಭವಾದಾಗ ಆಶ್ಚರ್ಯಕರ ಬೆಳವಣಿಗೆಯೆಂಬಂತೆ ಭಾರತೀಯರು ಸರ್ಕಾರವನ್ನು ಬೆಂಬಲಿಸಿದರು. ಕೆಲ ರಾಜರು ಹಣ, ಆಹಾರ, ಮದ್ದುಗುಂಡುಗಳನ್ನೂ ಒದಗಿಸಿದರು. ಕಾಂಗ್ರೆಸ್ನ ತೀವ್ರಗಾಮಿಗಳು ಹಾಗೂ ಮಂದಗಾಮಿಗಳು ಒಟ್ಟಾಗಿ ಬ್ರಿಟಿಷ್ ಸರ್ಕಾರವನ್ನು ಬೆಂಬಲಿಸಿದರು. ಬ್ರಿಟಿಷ್ ಸರ್ಕಾರವು ಕಾಂಗ್ರೆಸ್ನ ಬೇಡಿಕೆಗಳನ್ನು ಪರಿಗಣಿಸಿ 1919ರ ಗವರ್ನರ್ವೆಂಟ್ ಆಫ್ ಇಂಡಿಯಾ ಆಕ್ಟ್ ಅಡಿಯಲ್ಲಿ ಕೆಲ ಆಡಳಿತ ಸುಧಾರಣಾ ಕ್ರಮಗಳನ್ನು ಕೈಗೊಂಡಿತು.
ಈ ಸಕಾರಾತ್ಮಕ ಬೆಳವಣಿಗೆಯನ್ನು 1919 ರಲ್ಲಿ ರೌಲತ್ ಕಾಯ್ದೆ ಹದಗೆಡಿಸಿತು. ರೌಲತ್ ಆಯೋಗವು ರಾಜದ್ರೋಹವನ್ನು ಬಗ್ಗು ಬಡಿಯುವುದಕ್ಕಾಗಿ ಪತ್ರಿಕಾರಂಗ ವನ್ನು ತೆಪ್ಪಗಾಗಿಸುವದು, ರಾಜಕೀಯ ಕಾರ್ಯಕರ್ತರನ್ನು ವಿಚಾರಣೆಯಿಲ್ಲದೆ ಬಂಧನದಲ್ಲಿಡುವುದು- ಇಂಥ ವಿಶೇಷಾಧಿಕಾರಗಳನ್ನು ವೈಸ್ರಾಯ್ಗೆ ನೀಡಿತು. ಇದನ್ನು ವಿರೋಧಿಸಿ ರಾಷ್ಟ್ರೀಯನಾಯಕರು ಹರತಾಳಕ್ಕೆ ಕರೆಕೊಟ್ಟರು. ರೌಲತ್ ಕಾಯ್ದೆಯನ್ನು ವಿರೋಧಿಸಿ ನಡೆದ ಚಳವಳಿಗಳ ಪ್ರತೀಕಾರವೆಂಬಂತೆ 11919ರ ಏಪ್ರಿಲ್ 13ರಂದು ಪಂಜಾಬಿನ ಅಮೃತಸರದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆಯಿತು. ಇದರಿಂದ ದೇಶಾದ್ಯಂತ ಉದ್ವಿಗ್ನ ಸ್ಥಿತಿ ನಿರ್ವಣವಾಯಿತು.
ಕ್ರಾಂತಿಕಹಳೆ
ಚಂದ್ರಶೇಖರ್ ಆಜಾದ್
1920ರ ಹೊತ್ತಿಗೆ ಕ್ರಾಂತಿಕಾರಿಗಳು ಮತ್ತೆ ಸಂಘಟಿತರಾಗ ತೊಡಗಿದರು. ಚಂದ್ರಶೇಖರ್ ಆಜಾದ್ ಮುಂದಾಳತ್ವದಲ್ಲಿ ಹಿಂದುಸ್ತಾನ್ ಸಮಾಜವಾದಿ ಗಣರಾಜ್ಯ ಸಂಘಟನೆ ರಚನೆಯಾಯಿತು. ಭಗತ್ಸಿಂಗ್ ಮತ್ತು ಬಟುಕೇಶ್ವರ್ ದತ್ 1929ರ ಅಕ್ಟೊಬರ್ 8ರಂದು ಕೇಂದ್ರೀಯ ಶಾಸನ ಸಭೆಯಲ್ಲಿ, ಸಾರ್ವಜನಿಕ ಸುರಕ್ಷತಾ ಮಸೂದೆ ಮತ್ತು ವ್ಯಾಪಾರ ವಿವಾದಗಳ ಮಸೂದೆಯನ್ನು ಅಂಗೀಕರಿಸುವುದನ್ನು ಪ್ರತಿಭಟಿಸಿ, ಸ್ಪೋಟಕವನ್ನು ಎಸೆದರು. ಭಗತಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು 1931ರಲ್ಲಿ ನೇಣಿಗೇರಿಸಲಾಯಿತು.
ಆ ಹೊತ್ತಿಗಾಗಲೆ ಭಾರತಕ್ಕೆ ಮೋಹನದಾಸ ಕರಮಚಂದ ಗಾಂಧಿ ಆಗಮನವಾಗಿತ್ತು. (1915)ಸ್ವರಾಜ್ಯವನ್ನು ಗಳಿಸುವ ನಿಟ್ಟಿನಲ್ಲಿ ಅಹಿಂಸೆ ಹಾಗೂ ಅಸಹಕಾರ ಚಳವಳಿ ಮಾರ್ಗವನ್ನು ಗಾಂಧಿ ಭಾರತೀಯರಿಗೆ ತೋರಿಸಿಕೊಟ್ಟರು. 1920ರಲ್ಲಿ ಕಾಂಗ್ರೆಸ್ನ್ನು ಪುನರ್ ಸಂಘಟಿಸಲಾಯಿತು. ಸ್ವರಾಜ್ಯವೇ ಗುರಿಯಾಗಿರುವಂಥ ಹೊಸ ರಾಜನೀತಿಗಳನ್ನು ಅಳವಡಿಸಲಾಯಿತು.
ಗಾಂಧಿಯವರು ತಮ್ಮ ಮೊದಲ ದೇಶದುದ್ದಗಲದ ಸತ್ಯಾಗ್ರಹದಲ್ಲಿ ಜನರಿಗೆ ಬ್ರಿಟಿಷ್ ಶಿಕ್ಷಣ ಸಂಸ್ಥೆ, ನ್ಯಾಯಾಲಯಗಳನ್ನು ಮತ್ತು ಉತ್ಪನ್ನಗಳನ್ನು ಬಹಿಷ್ಕರಿಸಲು, ಸರ್ಕಾರದ ನೌಕರಿಗಳಿಗೆ ರಾಜೀನಾಮೆ ಕೊಡಲು, ತೆರಿಗೆಗಳನ್ನು ಕೊಡದಿರಲು ಒತ್ತಾಯಿಸಿದರು. ಇದಕ್ಕೆ ದೊರೆತ ಸಾರ್ವಜನಿಕ ಪ್ರತಿಕ್ರಿಯೆ ಅಭೂತಪೂರ್ವವಾಗಿದ್ದು ಸರ್ಕಾರಕ್ಕೆ ಹೊಸ ಸವಾಲನ್ನು ಒಡ್ಡಿತು. ಆದರೆ, ಚೌರಿ ಚೌರಾದಲ್ಲಿ ಕೆಲವು ಪ್ರತಿಭಟನಾಕಾರರಿಂದ ಪೋಲೀಸರ ಹತ್ಯೆಯಾದಾಗ ಖಿನ್ನರಾದ ಗಾಂಧೀಜಿ 1922ರಲ್ಲಿ ಅಸಹಕಾರ ಚಳವಳಿಯನ್ನು ಹಿಂಪಡೆದರು.
ಸಂಪೂರ್ಣ ಸ್ವಾತಂತ್ರ್ಯದ ಗೊತ್ತುವಳಿ
1929ರಲ್ಲಿ ಲಾಹೋರ್ನಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ನ ಐತಿಹಾಸಿಕ ಅಧಿವೇಶನದಲ್ಲಿ ಜವಾಹರಲಾಲ್ ನೆಹರೂ ಅಧ್ಯಕ್ಷತೆಯಲ್ಲಿ, ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯ ಗಳಿಸುವ ಕುರಿತು ಗೊತ್ತುವಳಿ ಅಂಗೀಕರಿಸಲಾಯಿತು. 26 ಜನವರಿ 1930ನ್ನು ಪೂರ್ಣ ಸ್ವರಾಜ್ಯದಿನ ಎಂದು ಆಚರಿಸಲು ನಿರ್ಧರಿಸಲಾಯಿತು. ಗಾಂಧೀಜಿಯವರು 1930ರ ಮಾರ್ಚ್ 12 ಮತ್ತು ಏಪ್ರಿಲ್ 6 ರ ನಡುವೆ ಅಹಮದಾಬಾದ್ನ ತಮ್ಮ ನೆಲೆಯಿಂದ ಸುಮಾರು 400 ಕಿ.ಮೀ ದೂರದ ದಂಡಿವರೆಗೆ ಗುಜರಾತ್ನ ಕಡಲತೀರದುದ್ದಕ್ಕೆ ಪಾದಯಾತ್ರೆ ಕೈಗೊಂಡರು. ಉಪ್ಪಿನ ಮೇಲೆ ಬ್ರಿಟಿಷರು ತೆರಿಗೆ ವಿಧಿಸಿದ್ದನ್ನು ಪ್ರತಿಭಟಿಸಿ, ದಂಡಿಯಲ್ಲಿ ಸಮುದ್ರದ ನೀರಿನಿಂದ ಉಪ್ಪನ್ನು ತಯಾರಿಸಿ ಕಾನೂನನ್ನು ಮುರಿದರು.
ಗಾಂಧಿ-ಇರ್ವಿನ್ ಒಪ್ಪಂದ
ಮಹಾತ್ಮ ಗಾಂಧಿ
1930-31ರ ನಾಗರಿಕ ಅಸಹಕಾರ ಆಂದೋಲನದ ಕಾಲಕ್ಕೆ ಸುಮಾರು ಒಂದು ಲಕ್ಷ ಜನರನ್ನು ಬಂಧನದಲ್ಲಿಡಲಾಯಿತು. 1931ರ ಮಾರ್ಚ್ನಲ್ಲಿ ಗಾಂಧಿ-ಇರ್ವಿನ್ ಒಪ್ಪಂದಕ್ಕೆ ಸಹಿಬಿದ್ದು ಸರ್ಕಾರ ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿತು. ಪ್ರತಿಯಾಗಿ ಗಾಂಧಿಯವರು ಅಸಹಕಾರ ಆಂದೋಲನವನ್ನು ಮುಂದುವರಿಸದಿರಲು ಒಪ್ಪಿದರು. 1931ರ ಸೆಪ್ಟೆಂಬರಿನಲ್ಲಿ ಲಂಡನ್ನಿನಲ್ಲಿ ನಡೆದ ದುಂಡುಮೇಜಿನ ಸಭೆ ವಿಫಲವಾಯಿತು. 1932ರ ಜನವರಿಯಲ್ಲಿ ಗಾಂಧಿಯವರು ಭಾರತಕ್ಕೆ ಮರಳಿ ಅಸಹಕಾರ ಆಂದೋಲನವನ್ನು ಮುಂದುವರಿಸಲು ನಿರ್ಧರಿಸಿದರು. ಬ್ರಿಟೀಷರು ಏಕಪಕ್ಷೀಯವಾಗಿ ಮತ್ತು ಭಾರತದ ಯಾವುದೇ ಚುನಾಯಿತ ಪ್ರತಿನಿಧಿಯೊಂದಿಗೆ ಸಮಾಲೋಚಿಸದೆ ಭಾರತವನ್ನು ಎರಡನೇ ವಿಶ್ವಯುದ್ಧಕ್ಕೆ ಧುಮುಕುವಂತೆ ಮಾಡಿದ್ದರು. ಇದನ್ನು 1939 ರಲ್ಲಿ ಕಾಂಗ್ರೆಸ್ನ ಅಧ್ಯಕ್ಷರಾಗಿ ಆಯ್ಕೆಯಾದ ಸುಭಾಷ್ಚಂದ್ರ ಬೋಸ್ ಮತ್ತು ಅವರ ಬೆಂಬಲಿಗರು ಖಂಡಿಸಿದರು. ಇದಕ್ಕೆ ಕಾಂಗ್ರೆಸ್ನ ಬೆಂಬಲ ದೊರೆಯದಿದ್ದಾಗ ಬೋಸ್ ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿದರು. ಗೃಹಬಂಧನಕ್ಕೊಳಗಾದ ಸುಭಾಷ್ರು 1941ರಲ್ಲಿ ತಪ್ಪಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಲು ಜರ್ಮನಿ ಮತ್ತು ಜಪಾನ್ ಬೆಂಬಲ ಪಡೆದರು. 1943ರಲ್ಲಿ ಅವರು ಜಪಾನಿನಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯನ್ನು ಸ್ಥಾಪಿಸಿ ಈಶಾನ್ಯ ಭಾರತವನ್ನು ಬ್ರಿಟಿಷರಿಂದ ಸ್ವತಂತ್ರಗೊಳಿಸಲು ಹೋರಾಡಿದರು.
ತೊಲಗಿದ ಬ್ರಿಟಿಷರು
ಕಾಂಗ್ರೆಸ್ 1942ರಲ್ಲಿ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಎನ್ನುವ ಬೇಡಿಕೆಯನ್ನು ಮುಂದಿಟ್ಟಿತು. 1947 ಫೆಬ್ರವರಿಯಲ್ಲಿ ನೌಕಾಪಡೆಯ ನಾವಿಕರು ದಂಗೆಯೆದ್ದರು. ಈ ದಂಗೆ ಕರಾಚಿ ಮತ್ತು ಕಲ್ಕತ್ತೆಯ ಬಂದರುಗಳಿಗೂ ಹರಡಿತು. ಒಟ್ಟು 78 ಹಡಗುಗಳು ಮತ್ತು ಸುಮಾರು 20,000 ನಾವಿಕರು ಈ ದಂಗೆಯಲ್ಲಿ ಪಾಲ್ಗೊಂಡರು. ಸ್ವಾತಂತ್ರ್ಯ ಚಳವಳಿಯಲ್ಲಿನ ಅಂತಿಮ ಹಂತದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಮತ್ತು ಈ ನೌಕಾದಂಗೆ ಹೆಚ್ಚಿನ ಪ್ರಭಾವ ಬೀರಿತ್ತೆಂಬುದು ಗಮನಾರ್ಹ. ಇಡೀ ಭಾರತ ಬ್ರಿಟಿಷರ ವಿರುದ್ಧ ನಿಂತಿತ್ತು. ಅಷ್ಟೆ ಅಲ್ಲದೆ ಎರಡನೇ ಮಹಾಯುದ್ಧದ ನಂತರ ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದಾಗಿ ಭಾರತದ ಆಡಳಿತ ಬ್ರಿಟಿಷರಿಗೆ ಹೊರೆಯಾಗಿತ್ತು. 1947 ರ ಮಧ್ಯದೊಳಗೆ ಎಲ್ಲಾ ರಾಜಕೀಯ ಬಂದಿಗಳನ್ನು ಸರ್ಕಾರ ವಿಮೋಚನೆಗೊಳಿಸಿತು. ಸಂಪೂರ್ಣ ಸ್ವಾತಂತ್ರ್ಯದ ಗುರಿಯಿಂದ ಕಾಂಗ್ರೆಸ್ಸು ಸರ್ಕಾರದೊಂದಿಗೆ ಮಾತುಕತೆ ಪ್ರಾರಂಭ ಮಾಡಿತು. 1947 ರ ಜೂನ್ 3ರಂದು, ಬ್ರಿಟಿಷ್ ಭಾರತದ ಕೊನೆಯ ಗವರ್ನರ್ ಜನರಲ್ ಮೌಂಟ್ಬ್ಯಾಟನ್ ಭಾರತ-ಪಾಕಿಸ್ತಾನ ವಿಭಜನೆಯನ್ನು ಪ್ರಕಟಿಸಿದರು. 1947ರ ಆ.15ರಂದು ಭಾರತವು ಸ್ವತಂತ್ರ ರಾಷ್ಟ್ರವಾಯಿತು.