ಮುಂಬೈ: ಮುಂದಿನ ಆರು ತಿಂಗಳ ಒಳಗಾಗಿ ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ಗೆಂದೇ ನಿರ್ದಿಷ್ಟ ಲಸಿಕೆ ಅಭಿವೃದ್ಧಿಪಡಿಸುವ ನಿರೀಕ್ಷೆ ಇದೆ ಎಂದು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್ ಪೂನಾವಾಲಾ ಹೇಳಿದ್ದಾರೆ.
ವಿಶ್ವದ ಅತಿ ದೊಡ್ಡ ಲಸಿಕೆ ತಯಾರಿಕಾ ಸಂಸ್ಥೆಯಾಗಿರುವ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು 'ಕೋವಿಶೀಲ್ಡ್' ಬ್ರ್ಯಾಂಡ್ ಅಡಿಯಲ್ಲಿ ಆಸ್ಟ್ರಾಜೆನೆಕಾದ ಕೋವಿಡ್ ಲಸಿಕೆ ತಯಾರಿಸುತ್ತಿದೆ.
ಓಮೈಕ್ರಾನ್‌ಗೆಂದೇ ನಿರ್ದಿಷ್ಟ ಲಸಿಕೆ ಅಭಿವೃದ್ಧಿಪಡಿಸುವ ನಿರೀಕ್ಷೆ ಹೊಂದಿರುವುದಾಗಿ ಸಂದರ್ಶನದಲ್ಲಿ ಪೂನಾವಾಲಾ ತಿಳಿಸಿರುವುದಾಗಿ 'ಎನ್‌ಡಿಟಿವಿ' ವರದಿ ಮಾಡಿದೆ.
ಈ ವಿಚಾರವಾಗಿ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು 'ರಾಯಿಟರ್ಸ್' ಸುದ್ದಿ ಸಂಸ್ಥೆ ಸಂಪರ್ಕಿಸಿದ್ದು, ಪ್ರತಿಕ್ರಿಯೆ ಕೋರಿದೆ. ಆದರೆ, ತಕ್ಷಣಕ್ಕೆ ಪ್ರತಿಕ್ರಿಯಿಸಲು ಕಂಪನಿ ನಿರಾಕರಿಸಿದೆ.