ಲಡಾಖ್ : ಲಡಾಖ್‌ನ ಡೆಮ್‌ಚೋಕ್‌ನಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದ ಭಾರತೀಯರನ್ನು ಚೀನಾ ಸೇನೆ ಆಗಸ್ಟ್ 21ರಂದು ತಡೆದಿದೆ ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ದೆಮ್‌ಚೋಕ್‌ನ ಸಿಎನ್‌ಎನ್ ಜಂಕ್ಷನ್‌ನಲ್ಲಿರುವ ಸಾಡ್ಲೆ ಪಾಸ್ ಸಮೀಪದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯ ಭಾರತದ ಗ್ರಹಿಕೆಯ ಒಳಗಡೆ ಇದ್ದ ಜಾನುವಾರು ಮೇಯಿಸುವವರನ್ನು ಚೀನಾ ಸೇನೆ ತಡೆದಿದೆ.ಈ ಘಟನೆಯ ನಂತರ ಬಿಕ್ಕಟ್ಟು ಪರಿಹರಿಸಲು ಭಾರತೀಯ ಸೇನೆ ಹಾಗೂ ಚೀನಾ ಸೇನೆಯ ಕಮಾಂಡರ್‌ಗಳ ನಡುವೆ ಒಂದೆರೆಡು ಸಭೆಗಳು ನಡೆದವು.
ಜಾನುವಾರು ಮೇಯಿಸುವವರು ಆಗಾಗ ಇಲ್ಲಿಗೆ ಬರುತ್ತಿದ್ದರು. 2019ರಲ್ಲಿ ಸಣ್ಣ ಘರ್ಷಣೆ ನಡೆದಿತ್ತು. ''ಈ ಬಾರಿ ಜಾನುವಾರು ಮೇಯಿಸುವವರು ತಮ್ಮ ಜಾನುವಾರುಗಳೊಂದಿಗೆ ತೆರಳಿದಾಗ ಚೀನಾ ಸೇನೆ ಇದು ತಮ್ಮ ಭೂಭಾಗ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಈ ವಿಷಯನವನ್ನು ಚೀನಾ ಅಧಿಕಾರಿಗಳಿಗೆ ತಿಳಿಸಲಾಗಿದೆ'' ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.
ಎರಡು ಸೇನೆಗಳ ನಡುವೆ ಮುಖಾಮುಖಿಯಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ. ''ಎಲ್‌ಎಸಿಯಿಲ್ಲಿ ಶಾಂತಿ ಕಾಪಾಡಲು ಹಾಗೂ ಸಂಘರ್ಷ ಉಲ್ಬಣವಾಗದಂತೆ ತಡೆಯಲು ಸ್ಥಳೀಯ ಮಟ್ಟದಲ್ಲಿ ಸಮಸ್ಯೆ ಬಗೆ ಹರಿಸಲು ತಳಮಟ್ಟದಲ್ಲಿ ಸ್ಥಳೀಯ ಕಮಾಂಡರ್‌ಗಳ ನಡುವೆ ವಾಡಿಕೆಯ ಮಾತುಕತೆ ನಡೆದಿದೆ. ಒಪ್ಪಿತ ಶಿಷ್ಟಾಚಾರದ ಭಾಗವಾಗಿ ಎಲ್‌ಎಸಿಯಲ್ಲಿ ಇದು ನಿರಂತರ ನಡೆಯುತ್ತಿರುತ್ತದೆ'' ಎಂದು ಮೂಲಗಳು ತಿಳಿಸಿವೆ.
2020 ಎಪ್ರಿಲ್‌ನಿಂದ ಈ ಪ್ರದೇಶದಲ್ಲಿ ಭಾರತ ಹಾಗೂ ಚೀನಾ ಸೇನೆ ತೀರಾ ಸಮೀಪದಲ್ಲಿವೆ. 2020 ಜೂನ್ 15ರಂದು ನಡೆದ ಗಲ್ವಾನ್ ಘರ್ಷಣೆಯ ನಂತರ ಈ ವಲಯದ ಹಲವು ಪ್ರದೇಶಗಳು ಗಸ್ತು ರಹಿತ ವಲಯಗಳಾಗಿವೆ. ಆಗ ಗಲ್ವಾನ್‌ನಲ್ಲಿ ಚೀನಾ ಸೇನೆಯೊಂದಿಗೆ ನಡೆದಿದ್ದ ಘರ್ಷಣೆಯಲ್ಲಿ ಭಾರತದ ಸೇನೆಯ 20ಕ್ಕೂ ಅಧಿಕ ಯೋಧರು ಮೃತಪಟ್ಟಿದ್ದರು.
2018ರಲ್ಲಿ ದೆಮ್‌ಚೋಕ್ ಅಥವಾ ಸಿಎನ್‌ಎನ್ ಜಂಕ್ಷನ್‌ನ ಚಾರ್ಡಿಂಗ್ ನಿಲುಂಗ್ ನಲ್ಲಾಹ್‌ನಿಂದ ಮೀಟರ್ ದೂರದಲ್ಲಿ ಚೀನಾ ಸೇನೆ ಟೆಂಟ್ ಹಾಕಿತ್ತು.