ನವದೆಹಲಿ: ಕೈಗಾರಿಕಾ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುತ್ತಿರುವ ಮತ್ತು ಮಲಿನಗೊಳಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸೂಚಿಸಿದೆ.
ಎನ್‌ಜಿಟಿ ಅಧ್ಯಕ್ಷ, ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ಅವರ ನೇತೃತ್ವದ ನ್ಯಾಯಪೀಠ, ಸಚಿವಾಲಯಕ್ಕೆ ಈ ಸಂಬಂಧ ನೋಟಿಸ್ ಜಾರಿ ಮಾಡಿದೆ.
ಹರಿಯಾಣದ ಸೋನಿಪತ್‌ನ ಭಾರಿ ಕೈಗಾರಿಕಾ ಪ್ರದೇಶದಲ್ಲಿ ನೀರಿನ ಬಳಕೆಯಲ್ಲಿ ಹಸಿರು ನ್ಯಾಯಮಂಡಳಿಯ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಪ್ರಕರಣದ ವಿಚಾರಣೆಯನ್ನು ಪೀಠ ನಡೆಸಿತು.
ಅಂತರ್ಜಲ ಮರುಪೂರಣ ಮಾಡದೇ, ವಾಣಿಜ್ಯ ಉದ್ದೇಶಗಳಿಗಾಗಿ ಹೆಚ್ಚು ಅಂತರ್ಜಲ ಬಳಕೆಗೆ ಆಸ್ಪದ ಕಲ್ಪಿಸುವುದು 'ಸುಸ್ಥಿರ ಅಭಿವೃದ್ಧಿ'ಯ ತತ್ವವನ್ನು ವಿಫಲಗೊಳಿಸಿದಂತೆ ಎಂದು ಪೀಠ ಹೇಳಿದೆ.
ಜಲ ಮರುಪೂರಣಕ್ಕೆ ಪರಿಣಾಮಕಾರಿಯಾದ ನಿಯಮಾವಳಿ ಚೌಕಟ್ಟನ್ನು ರೂಪಿಸದೇ, ಅಂತರ್ಜಲದ ಅನಿಮಿಯತ ಬಳಕೆಗೆ ದಾರಿ ಮಾಡಿಕೊಟ್ಟಂತಾಗಿದೆ. ಮಳೆ ನೀರು ಸಂಗ್ರಹ ಮತ್ತು ಇನ್ನಿತರ ನಿಬಂಧನೆಗಳು ಇದ್ದಾಗ್ಯೂ ಅಂತಹ ನೀತಿಗಳ ಅನುಷ್ಠಾನ ಇಂದಿಗೂ ಸವಾಲಾಗಿಯೇ ಇದೆ ಎಂದು ಹಸಿರು ಪೀಠ ಹೇಳಿದೆ.
ದೇಶದಲ್ಲಿ ಅಂತರ್ಜಲ ಅಭಿವೃದ್ಧಿ ಶೇ 61.6 ರಷ್ಟಿದೆ. ದೆಹಲಿ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಅಂತರ್ಜಲ ಬಳಕೆ ಅತೀ ಹೆಚ್ಚಿದ್ದು, ಶೇ 100ಕ್ಕೂ ಹೆಚ್ಚಿನ ಪ್ರಮಾಣದಲ್ಲಿದೆ. ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ ಮತ್ತು ಚಂಡೀಗಡದಲ್ಲಿ ಅಂತರ್ಜಲ ಬಳಕೆ ಶೇ 60ರಿಂದ ಶೇ 100ರ ಒಳಗಿದೆ. ಉಳಿದ ರಾಜ್ಯಗಳಲ್ಲಿ ಅಂತರ್ಜಲ ಹೊರತೆಗೆಯುವ ಪ್ರಮಾಣ ಶೇ 60ಕ್ಕಿಂತ ಕಡಿಮೆ ಇದೆ ಎಂದು ವರದಿ ತಿಳಿಸಿದೆ.