ನವದೆಹಲಿ: ಚುನಾವಣಾ ಪೂರ್ವದಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು 'ಉಚಿತ ಕೊಡುಗೆ'ಗಳನ್ನು ಘೋಷಿಸುವ ವಿಷಯವು ಸಂಕೀರ್ಣವಾಗಿದ್ದು, ಇದರ ವಿಚಾರಣೆಯನ್ನು ತ್ರಿಸದಸ್ಯ ಪೀಠಕ್ಕೆ ವಹಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.
ಮುಖ್ಯನ್ಯಾಯಮೂರ್ತಿ ಎನ್.ವಿ. ರಮಣ ಅವರ ನೇತೃತ್ವದ ನ್ಯಾಯಪೀಠವು ಈ ಪ್ರಕರಣಗಳಲ್ಲಿನ ಅರ್ಜಿಗಳನ್ನು ವಿಚಾರಣೆ ನಡೆಸುವಾಗ ಕೆಲವು ಪ್ರಾಥಮಿಕ ವಿಷಯಗಳನ್ನು ಉದ್ದೇಶಪೂರ್ವಕವಾಗಿಯೇ ಚರ್ಚಿಸಬೇಕಾಗುತ್ತದೆ ಎಂಬುದನ್ನು ಗಮನಿಸಿತು.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ವೃತ್ತಿಜೀವನದ ಕೊನೆಯ ದಿನವಾದ ಶುಕ್ರವಾರ ಸುಪ್ರೀಂಕೋರ್ಟ್ ಈ ವಿಷಯ ಕುರಿತು ಆದೇಶ ನೀಡಿದೆ
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ಎಸ್. ಸುಬ್ರಮಣಿಯಂ ಬಾಲಾಜಿ ವರ್ಸಸ್ ತಮಿಳುನಾಡು ಸರ್ಕಾರ ಹಾಗೂ ಇತರರ ವಿಷಯದಲ್ಲಿ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠವು 2013ರಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದೂ ಹೇಳಿದೆ.
ದ್ವಿಸದಸ್ಯ ಪೀಠವು ನೀಡಿದ ತೀರ್ಪನ್ನು ತಳ್ಳಿಹಾಕಲು ಒಳಗೊಂಡಿರುವ ಸಮಸ್ಯೆಗಳ ಸಂಕೀರ್ಣತೆಗಳನ್ನು ನೋಡಿದರೆ, ನಾವು ಮುಖ್ಯ ನ್ಯಾಯಮೂರ್ತಿ ಅವರಿಂದ ಆದೇಶಗಳನ್ನು ಪಡೆದ ನಂತರ ತ್ರಿಸದಸ್ಯ ಪೀಠದ ಮುಂದೆ ಅರ್ಜಿಗಳ ಪಟ್ಟಿಯನ್ನು ಆಲಿಸಲು ನಿರ್ದೇಶಿಸುತ್ತೇವೆ ಎಂದೂ ಪೀಠವು ತಿಳಿಸಿದೆ.
ನಾಲ್ಕು ವಾರಗಳ ನಂತರ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿತು.