ಭಿಂದ್: ಆಂಬ್ಯುಲೆನ್ಸ್ ಸಿಗದೇ ಕುಟುಂಬವೊಂದು ಕೈಗಾಡಿಯಲ್ಲಿ ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಬಗ್ಗೆ ವರದಿ ಮಾಡುವ ಮೂಲಕ ಕಳಪೆ ಆರೋಗ್ಯ ಸೌಲಭ್ಯಗಳನ್ನು ಎತ್ತಿ ತೋರಿಸಿದ್ದ ಮೂವರು ಪತ್ರಕರ್ತರ ವಿರುದ್ಧ ಮಧ್ಯ ಪ್ರದೇಶದ ಭಿಂದ್ ಪೊಲೀಸರು ಫೋರ್ಜರಿ ಪ್ರಕರಣ ದಾಖಲಿಸಿದ್ದಾರೆ.
ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ರಾಜೀವ್ ಕೌರವ್ ಅವರು ನೀಡಿದ ದೂರಿನ ಮೇರೆಗೆ ಆಗಸ್ಟ್ 18 ರಂದು ಪತ್ರಕರ್ತರಾದ ಕುಂಜಬಿಹಾರಿ ಕೌರವ್, ಅನಿಲ್ ಶರ್ಮಾ ಮತ್ತು ಎನ್‌ಕೆ ಭಟೇಲೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದಾಬೋ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಕಮಲೇಶ್ ಕುಮಾರ್ ಸೋಮವಾರ ತಿಳಿಸಿದ್ದಾರೆ.
ಪತ್ರಕರ್ತರ ವಿರುದ್ಧ ಭಾರತೀಯ ದಂಡ ಸಂಹಿತೆಯ 420 (ನಕಲಿ) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಎಫ್‌ಐಆರ್‌ನ ಪ್ರಕಾರ, ಗಯಾ ಪ್ರಸಾದ್ (76) ಅವರ ಕುಟುಂಬಕ್ಕೆ ಆಂಬ್ಯುಲೆನ್ಸ್ ಲಭ್ಯವಾಗದ ಕಾರಣ ಮತ್ತು ಅವರಿಗೆ ಸರ್ಕಾರದ ಯೋಜನೆಗಳ ಪ್ರಯೋಜನೆ ನೀಡದ ಕಾರಣ ಅವರನ್ನು ಕೈಗಾಡಿಯಲ್ಲಿ ಕರೆದೊಯ್ಯಬೇಕಾಯಿತು ಎಂದು ಈ ಪತ್ರಕರ್ತರು ಆಗಸ್ಟ್ 15 ರಂದು ಸುದ್ದಿ ಪ್ರಸಾರ ಮಾಡಿದ್ದರು.
ಸುದ್ದಿ ಪ್ರಕಟಣೆ ಮತ್ತು ಪ್ರಸಾರದ ನಂತರ, ಜಿಲ್ಲಾಡಳಿತವು ಸುದ್ದಿ ವರದಿಯ ತನಿಖೆಗಾಗಿ ಕಂದಾಯ ಮತ್ತು ಆರೋಗ್ಯ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ ಎಂದು ಎಫ್‌ಐಆರ್ ತಿಳಿಸಿದೆ.