ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದ ನಂ.16585/86 ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ (ವಯಾ ಮೈಸೂರು) ರಾತ್ರಿ ರೈಲನ್ನು ವಾರದಲ್ಲಿ 6 ದಿನವೂ ಓಡಿಸಲು ಕೇಂದ್ರ ರೈಲ್ವೆ ಮಂಡಳಿ ಅನುಮತಿ ನೀಡಿದೆ.
ನೈಋತ್ಯ ರೈಲ್ವೆಯಿಂದ ಜುಲೈ 27ರಂದು ರೈಲ್ವೆ ಬೋರ್ಡ್‌ಗೆ ಈ ಕುರಿಂತೆ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪತ್ರ ಬರೆಯಲಾಗಿತ್ತು. ಇದೇ ವೇಳೆ ವಾರದಲ್ಲಿ ಮೂರು ಬಾರಿ ಸಂಚರಿಸುತ್ತಿದ್ದ ನಂ.06547/48 ಕೆಎಸ್‌ಆರ್ ಬೆಂಗಳೂರು-ಮಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಈ ರೈಲಿನೊಂದಿಗೆ ವಿಲೀನಗೊಳಿಸಲಾಗಿದೆ. ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿರಂತರವಾಗಿ ಭೂ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಪ್ರಯಾಣಿಕರ ಬೇಡಿಕೆ ಮೇರೆಗೆ ಈ ವಿಶೇಷ ರೈಲನ್ನು ಆರಂಭಿಸಲಾಗಿತ್ತು.
ಟರ್ಮಿನಲ್ ಬದಲಾವಣೆ: ನಂ.16585/86 ಕೆಎಸ್‌ಆರ್ ಬೆಂಗಳೂರು- ಮಂಗಳೂರು ಎಕ್ಸ್‌ಪ್ರೆಸ್ ರೈಲಿನ ಟರ್ಮಿನಲ್ ಸದ್ಯ ಇರುವ ಕೆಎಸ್‌ಆರ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಸಿಟಿ ಜಂಕ್ಷನ್)ನಿಂದ ಎಸ್‌ಎಂವಿಬಿ (ಸರ್ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ ಬೈಯಪ್ಪನ ಹಳ್ಳಿ)ಗೆ ವಿಸ್ತರಿಸಲಾಗಿದೆ. ಟರ್ಮಿನಲ್ ಬದಲಾವಣೆಯಾದರೂ ಬೆಂಗಳೂರು ಸಿಟಿ, ಕಂಟೋನ್ಮೆಂಟ್, ಸಿಟಿ ಮತ್ತು ಕೆಂಗೇರಿ ಸೇರಿದಂತೆ ಈ ಹಿಂದಿನ ಮಾರ್ಗದಲ್ಲಿಯೇ ಸಂಚರಿಸಲಿದೆ.
ವಿಸ್ತರಣೆ ಬೇಡಿಕೆ: ಈ ರೈಲನ್ನು ಕಾರವಾರ ಅಥವಾ ವಾಸ್ಕೋ-ಡ-ಗಾಮ ನಿಲ್ದಾಣಕ್ಕೆ ವಿಸ್ತರಿಸುವ ಕುರಿತಾಗಿಯೂ ಬೇಡಿಕೆ ಕೇಳಿ ಬರುತ್ತಿದೆ. ಈಗಾಗಲೇ ಸಂಸದ ಪ್ರತಾಪಸಿಂಹ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ವಾಸ್ಕೋ -ಡ-ಗಾಮ ನಿಲ್ದಾಣಕ್ಕೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಆ ಮೂಲಕ ಗೋವಾ-ಮೈಸೂರು ನಡುವೆ ಪ್ರವಾಸಿಗರಿಗೆ ಸಂಚಾರ ಸುಲಭ ಸಾಧ್ಯವಾಗಲಿದೆ ಎನ್ನುವುದು ಸಂಸದರ ಮಾತಾಗಿದೆ.