ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಗುಲಾಂ ನಬಿ ಆಜಾದ್ ರಾಜಿನಾಮೆ ಬಳಿಕ ಕಾಂಗ್ರೆಸ್ ಗೆ ಮತ್ತೊಂದು ಆಘಾತ ಎದುರಾಗಿದ್ದು, ಹಿಮಾಚಲ ಪ್ರದೇಶದಲ್ಲಿ ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ ತಮ್ಮ ಪಕ್ಷದ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ.
ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಸಮಾಲೋಚನೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದ್ದು, ಇದರಿಂದ ಮನನೊಂದು ಹಿಮಾಚಲ ಪ್ರದೇಶ ಘಟಕದ ಚಾಲನಾ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಆನಂದ್ ಶರ್ಮಾ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಆನಂದ್ ಶರ್ಮಾ ಅವರು, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಈ ಕುರಿತಂತೆ ಮಾಧ್ಯಮಗಳಿಗೂ ಮಾಹಿತಿ ನೀಡಿರುವ ಆನಂದ್ ಶರ್ಮಾ, ಪಕ್ಷದ ಹಿಮಾಚಲ ಪ್ರದೇಶ (Himachal Pradesh)ಘಟಕದ ಚಾಲನಾ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಭಾನುವಾರ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷದ ಪ್ರಮುಖ ಹುದ್ದೆಗೆ ಗುಲಾಂ ನಬಿ ಆಜಾದ್ ರಾಜೀನಾಮೆ ನೀಡಿದ ಬೆನ್ನಲ್ಲೇ ಶರ್ಮಾ ಈ ನಿರ್ಧಾರ ಪ್ರಕಟಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಪತ್ರದಲ್ಲೇನಿದೆ?ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಸಮಾಲೋಚನೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಶರ್ಮಾ ಆರೋಪಿಸಿದ್ದು, ಇದೇ ಕಾರಣಕ್ಕೆ ತಾವು ರಾಜಿನಾಮೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಶರ್ಮಾ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.