ಭುಜ್: ದೇಶದಲ್ಲಿ ಮತ್ತು ಜಗತ್ತಿನ ಎದುರು ಗುಜರಾತ್ ಹೆಸರಿಗೆ ಚ್ಯುತಿ ತರಲು ಮತ್ತು ರಾಜ್ಯಕ್ಕೆ ಬರುವ ಬಂಡವಾಳವನ್ನು ತಡೆಯಲು ಸಂಚು ರೂಪಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದರು.
ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಕಛ್ ಜಿಲ್ಲೆಯಲ್ಲಿ ಸುಮಾರು ₹4,400 ಕೋಟಿ ಮೊತ್ತದ ಯೋಜನೆಗಳಿಗೆ ಅವರು ಶಿಲಾನ್ಯಾಸ ನೆರವೇರಿಸಿದರು.
ನಂತರ, 2001ರ ಜನವರಿ 21ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಭೂಕಂಪದ ಸಂತ್ರಸ್ತರ ಸ್ಮರಣಾರ್ಥವಾಗಿ ನಿರ್ಮಿಸಿರುವ 'ಸ್ಮೃತಿ ವನ' ಸ್ಮಾರಕದ ಉದ್ಘಾಟನೆ ನೆರವೇರಿಸಿ ಅವರು ರ‍್ಯಾಲಿ ಉದ್ದೇಶಿಸಿ ಮಾತನಾಡಿದರು.
ವಿಪತ್ತು ನಿರ್ವಹಣಾ ಕಾಯ್ದೆಯನ್ನು ಪ್ರಥಮ ಭಾರಿ ರೂಪಿಸಿದ ರಾಜ್ಯ ಗುಜರಾತ್. ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ನಿರ್ವಹಣೆ ವೇಳೆಯೂ ಆ ಕಾಯ್ದೆ ಉತ್ತೇಜನಕಾರಿ ಆಗಿತ್ತು. ಬಂಡವಾಳಕ್ಕೆ ತಡೆ ಒಡ್ಡುವ ಎಲ್ಲಾ ರೀತಿಯ ಸಂಚುಗಳನ್ನೂ ವಿಫಲಗೊಳಿಸಿ ಗುಜರಾತ್ ಮತ್ತು ಕಛ್ ಅಭಿವೃದ್ಧಿ ಹೊಂದಿದವು ಎಂದರು.
ಭೂಕಂಪ ಸಂಭವಿಸಿದಾಗ ತಾವು ಕೇವಲ ಬಿಜೆಪಿ ಕಾರ್ಯಕರ್ತರಾಗಿದ್ದು, ಸಂತ್ರಸ್ತರಿಗೆ ಸಹಾಯ ಮಾಡಲು ದೆಹಲಿಯಿಂದ ಕಛ್‌ಗೆ ಆಗಮಿಸಿದ್ದನ್ನು ನೆನೆದರು.
ಸರ್ದಾರ್ ಆಣೆಕಟ್ಟು ವಿರೋಧಿಸುತ್ತಿರುವವರು ನಗರ ನಕ್ಸಲರು: ಜಿಲ್ಲೆಗೆ ನರ್ಮದಾ ನೀರು ಬರುವುದನ್ನು ಕಛ್ ಜನರು ಸಂಭ್ರಮಿಸುತ್ತಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದರು. ನಗರ ನಕ್ಸಲರು ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸುತ್ತಿದ್ದಾರೆ. ಅವರಲ್ಲಿ ಒಬ್ಬ ನಗರ ನಕ್ಸಲ್ ಮೇಧಾ ಪಾಟ್ಕರ್ ಆಗಿದ್ದಾರೆ. ಅವರನ್ನು ಯಾವ ಪಕ್ಷ ಬೆಂಬಲಿಸುತ್ತಿದೆ ಎಂದೂ ತಿಳಿದಿದೆ ಎಂದರು.
ಮೇಧಾ ಅವರು ಆಮ್ ಆದ್ಮಿ ಪಕ್ಷದ ಟಿಕೆಟ್‌ನಿಂದ ಲೋಕಸಭೆ ಚುನಾವಣೆಯಲ್ಲಿ ಮುಂಬೈನಿಂದ ಸ್ಪರ್ಧಿಸಿದ್ದರು.