ನವದೆಹಲಿ: ದೇಶದಲ್ಲಿ ಎಲ್ಲದಕ್ಕೂ ಆಧಾರವೇ ಆಧಾರ್ ಎಂಬಂತಾಗಿದೆ. ಏಕೆಂದರೆ ಪ್ಯಾನ್ ನಂಬರ್, ಬ್ಯಾಂಕ್ ಖಾತೆ ಮಾತ್ರವಲ್ಲದೆ ಹಲವಾರು ವಿಷಯಗಳಲ್ಲಿ ಎಲ್ಲದಕ್ಕೂ ಆಧಾರ್ ನಂಬರ್ ಲಿಂಕ್ ಮಾಡಲೇಬೇಕಾಗಿರುತ್ತದೆ.
ಅದೇ ರೀತಿ ಮತದಾರರ ಗುರುತಿನ ಚೀಟಿಗೂ ಆಧಾರ್ ನಂಬರ್ ಲಿಂಕ್ ಮಾಡುವ ಕುರಿತಂತೆ ಕೆಲವು ಕಾಲದಿಂದ ಚರ್ಚೆ ಜಾರಿಯಲ್ಲಿದ್ದು, ನಕಲಿ ಮತದಾನ ತಪ್ಪಿಸಲು ಆಧಾರ್ ನಂಬರ್ ವೋಟರ್ ಐಡಿಗೂ ಲಿಂಕ್ ಮಾಡುವುದು ಉತ್ತಮ ಎಂಬ ಅನಿಸಿಕೆಗಳೂ ವ್ಯಕ್ತವಾಗಿವೆ.
ಈ ಮಧ್ಯೆ ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಬೇಕು, ಹಾಗೆ ಮಾಡದಿದ್ದರೆ ಮತದಾರರ ಪಟ್ಟಿಯಲ್ಲಿನ ಅಂಥ ಹೆಸರುಗಳನ್ನು ತೆಗೆದು ಹಾಕಲಾಗುವುದು ಎಂಬ ಸುದ್ದಿ ಕೂಡ ಹರಿದಾಡಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆಯನ್ನೂ ನೀಡಿದೆ.
ಮತದಾರರ ಗುರುತಿನ ಚೀಟಿಯ ವಿವರದಲ್ಲಿ ಆಧಾರ್ ನಂಬರ್ ಸಲ್ಲಿಕೆ ಮಾಡುವುದು ಐಚ್ಛಿಕ ವಿಷಯ, ಅದು ಕಡ್ಡಾಯವೇನಲ್ಲ. ಆಧಾರ್ ನಂಬರ್ ಜೋಡಣೆ ಮಾಡದಿದ್ದರೆ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕುವುದಿಲ್ಲ. ಈ ಬಗ್ಗೆ ಎಲ್ಲ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.