ಕಾಸರಗೋಡು: ಗಣೇಶೋತ್ಸವ ಸಂಭ್ರಮಾಚರಣೆ ದಿನ ಸಮೀಪಿಸುತ್ತಿದ್ದಂತೆ ಖ್ಯಾತ ಕಲಾವಿದ, ವಿಗ್ರಹರಚನಾಕಾರ ಕಾಸರಗೋಡಿನ ಲಕ್ಷ್ಮೀಶ ಆಚಾರ್ಯ ಅವರು ಬಿಡುವಿಲ್ಲದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಸರಗೋಡು ನೆಲ್ಲಿಕುಂಜೆ ಬಾಲಕಿಯರ ಸರ್ಕಾರಿ ಹೈಯರ್‍ಸೆಕೆಂಡರಿ ಶಾಲೆ ಸನಿಹದ ತಮ್ಮ ಮನೆಯಲ್ಲಿ 30ಕ್ಕೂ ಹೆಚ್ಚು ಬೃಹತ್ ಗಣಪತಿ ವಿಗ್ರಹಗಳ ರಚನೆಯಲ್ಲಿ ಬ್ಯುಸಿಯಾಗಿದ್ದಾರೆ. ಕಾಸರಗೋಡು, ಪಾಲಕುನ್ನು, ತೃಕ್ಕನ್ನಾರ್, ಪಯ್ಯನ್ನೂರ್, ಕಣ್ಣೂರು ವರೆಗೂ ಲಕ್ಷ್ಮೀಶ ಆಚಾರ್ಯ ಅವರು ತಯಾರಿಸಿದ ಗಣಪತಿ ವಿಗ್ರಹಗಳು ರವಾನೆಯಾಗುತ್ತಿದೆ.
ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಬದಿಯಡ್ಕ, ಕಾಞಂಗಾಡು, ತೃಕ್ಕರಿಪುರ, ಕಣ್ಣೂರಿನ ಕೂತುಪರಂಬ ಸೇರಿದಂತೆ ವಿವಿಧೆಡೆಗೆ ಲಕ್ಷ್ಮೀಶ ಆಚಾರ್ಯ ಅವರು ಕಾಯಂ ಆಗಿ ವಿಗ್ರಹ ತಯಾರಿಸಿಕೊಡುತ್ತಿದ್ದಾರೆ. ಲಕ್ಷ್ಮೀಶ ಆಚಾರ್ಯ ಅವರೊಂದಿಗೆ ಯೋಗೀಶ್ ಆಚಾರ್ಯ, ಕಾರ್ತಿಕ್, ಹೃತಿಕ್, ವಿಶ್ವನಾಥ್, ಪ್ರಣವ್, ಶಿವಾನಂದ ಆಚಾರ್ಯ, ವಸಂತ ಆಚಾರ್ಯ ಎಂಬವರು ಸಹಾಯಕರಾಗಿ ದುಡಿಯುತ್ತಿದ್ದಾರೆ. ಒಂದುವರೆ ಅಡಿಯಿಂದ ತೊಡಗಿ ಏಳುವರೆ ಅಡಿ ಎತ್ತರದ ಗಣೇಶ ವಿಗ್ರಹ ಇಲ್ಲಿ ತಯಾರಾಗುತ್ತಿದೆ.
ಕೋವಿಡ್ ಕಾಲಘಟ್ಟದಲ್ಲೂ ವಿಗ್ರಹ ರಚನೆಯಲ್ಲಿನ ಬೇಡಿಕೆ ಕುಸಿದಿಲ್ಲ.ಕಲ್ಲಡ್ಕ ಮುಂತಾದೆಡೆಯಿಂದ ಆವೆಮಣ್ಣು ತರಿಸಿ, ವಿಗ್ರಹ ರಚನೆ ಮಾಬೇಕಾಗಿದ್ದು, ವರ್ಷ ಕಳೆದಂತೆ ನಿರ್ಮಾಣ ವೆಚ್ಚದಲ್ಲಿ ಗಣನೀಯ ಏರಿಕೆಯುಂಟಾಗುತ್ತಿರುವುದು ವಿಗ್ರಹ ತಯಾರಿಯ ಮೇಲೆ ಕರಿಛಾಯೆ ಬೀರಲಾರಂಭಿಸಿರುವುದಾಗಿ ಲಕ್ಷ್ಮೀಶ ಆಚಾರ್ಯ ತಿಳಿಸುತ್ತಾರೆ.