ರಷ್ಯಾ :ರಷ್ಯಾ ಸೇನಾ ನಿಯಂತ್ರಣದಲ್ಲಿರುವ ಉಕ್ರೇನ್ ನ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವನ್ನು ತಪಾಸಣೆ ಮಾಡುವುದಕ್ಕೆ ವಿಶ್ವಸಂಸ್ಥೆಯ ಅಣು ಕಾವಲುಗಾರ ಸಂಸ್ಥೆಗೆ ಅವಕಾಶ ನೀಡಬೇಕು ಎಂದು ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ.
ಈ ಅಣು ವಿದ್ಯುತ್ ಸ್ಥಾವರವನ್ನು ರಷ್ಯಾ ಆಕ್ರಮಿಸಿಕೊಂಡಿರುವುದು ಈ ಸ್ಥಾವರದ ಸುರಕ್ಷತೆ ಹಾಗೂ ಭದ್ರತೆಗೆ ಅಪಾಯ ಉಂಟು ಮಾಡುವ ಅಣು ಅಪಘಾತ ಅಥವಾ ಘಟನೆಗಳ ಸಾಧ್ಯತೆ ಇದೆ ಎಂದು ವರದಿಗಾರರಿಗೆ ಬ್ರರಸೆಲ್ಸ್ ನಲ್ಲಿ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ತಪಾಸಣೆಗೆ ಅವಕಾಶ ಮಾಡಿಕೊಡುವುದರ ತುರ್ತು ಅಗತ್ಯವಿದ್ದು, ರಷ್ಯಾದ ಎಲ್ಲಾ ಪಡೆಗಳು ವಾಪಸ್ ತೆರಳುವಂತೆ ನೋಡಿಕೊಳ್ಳಬೇಕಿದೆ. ಅಣು ಸ್ಥಾವರದ ಮೇಲಿನ ರಷ್ಯಾದ ಸೇನಾ ನಿಯಂತ್ರಣ ಉಕ್ರೇನ್ ನ ಜನಸಂಖ್ಯೆಗೆ ಮಾರಕವಾದದ್ದು ಎಂದು ಸ್ಟೋಲ್ಟೆನ್‌ಬರ್ಗ್ ಅಭಿಪ್ರಾಯಪಟ್ಟಿದ್ದಾರೆ. ಮಾರ್ಚ್ ನಲ್ಲಿ ರಷ್ಯಾದ ಪಡೆಗಳು ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವನ್ನು ಆಕ್ರಮಿಸಿಕೊಂಡಿದ್ದವು.