ನವದೆಹಲಿ: ಗುಜರಾತ್ ಕರಾವಳಿಯಲ್ಲಿ ಸಮುದ್ರ ಗಡಿ ರೇಖೆಯನ್ನು ದಾಟಿ ಭಾರತದ ಜಲಪ್ರದೇಶವನ್ನು ಪ್ರವೇಶಿಸಿದ್ದ ಪಾಕಿಸ್ತಾನದ ನೌಕಾಪಡೆಯ ಯುದ್ಧನೌಕೆಯನ್ನು ಭಾರತೀಯ ಕರಾವಳಿ ಕಾವಲು ಪಡೆಯ ಕಡಲ ಕಣ್ಗಾವಲು ವಿಮಾನವು ಪತ್ತೆಹಚ್ಚಿದ್ದು, ಹಿಂದಿರುಗಲು ಸೂಚನೆ ನೀಡಿರುವ ಬಗ್ಗೆ ವರದಿಯಾಗಿದೆ.
ಸರ್ಕಾರಿ ಮೂಲಗಳ ಪ್ರಕಾರ, ಜುಲೈ ತಿಂಗಳ ಮೊದಲಾರ್ಧದಲ್ಲಿ ಗಾಢ ಮಳೆಗಾಲದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಪಾಕಿಸ್ತಾನ ನೌಕಾಪಡೆಯ ಹಡಗು (ಪಿಎನ್‌ಎಸ್) ಅಲಂಗೀರ್ ಎರಡು ದೇಶಗಳ ನಡುವಿನ ಕಡಲ ಗಡಿರೇಖೆಯನ್ನು ದಾಟಿ ಭಾರತೀಯ ಜಲಪ್ರದೇಶವನ್ನು ಪ್ರವೇಶಿಸಿತ್ತು. .
ಭಾರತೀಯ ಜಲಪ್ರದೇಶವನ್ನು ಪ್ರವೇಶಿಸಿದ ಸ್ವಲ್ಪ ಸಮಯದಲ್ಲಿ ಅದನ್ನು ನೌಕಾಪಡೆಯ ಕಣ್ಗಾವಲು ವಿಮಾನವು ಪತ್ತೆ ಮಾಡಿತ್ತು.
ಭಾರತೀಯ ನೌಕಾಪಡೆಯು ಸಮುದ್ರ ಗಡಿ ಕಾನೂನುಗಳ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದೆ. ಗಡಿಯಿಂದ ಐದು ನಾಟಿಕಲ್ ಮೈಲುಗಳ ಒಳಗೆ ಮೀನುಗಾರಿಕೆ ನಡೆಸಲು ತಮ್ಮದೇ ದೇಶದ ಮೀನುಗಾರರಿಗೂ ಸಹ ಅನುಮತಿಸುವುದಿಲ್ಲ.
ಭಾರತದ ಜಲಪ್ರದೇಶದಲ್ಲಿ ಪಾಕಿಸ್ತಾನದ ಯುದ್ಧನೌಕೆಗಳ ಉಪಸ್ಥಿತಿಯ ಬಗ್ಗೆ ವಿಮಾನವು ಕಮಾಂಡ್ ಕೇಂದ್ರಕ್ಕೆ ಮಾಹಿತಿ ರವಾನಿಸಿತ್ತು. ಪಾಕಿಸ್ತಾನದ ಯುದ್ಧನೌಕೆಗೆ ಗಡಿ ದಾಟಿರುವ ಬಗ್ಗೆ ಎಚ್ಚರಿಕೆ ನೀಡಿತ್ತು ಮತ್ತು ತನ್ನ ಪ್ರದೇಶಕ್ಕೆ ಹಿಂತಿರುಗುವಂತೆ ಸೂಚಿಸಿತ್ತು. ಆದರೆ, ನೌಕೆಯ ಕ್ಯಾಪ್ಟನ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಭಾರತೀಯ ಕರಾವಳಿ ಕಾವಲುಪಡೆ ಮತ್ತು ಭಾರತೀಯ ವಾಯುಪಡೆಯು ಗುಜರಾತ್ ಕರಾವಳಿಯುದ್ದಕ್ಕೂ ಯಾವುದೇ ಬೆದರಿಕೆಗಳನ್ನು ತಡೆಯಲು ನಿಗಾ ಇರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ಚಟುವಟಿಕೆಗಳು, ವಿಶೇಷವಾಗಿ ಮಾದಕ ವಸ್ತು ಭಯೋತ್ಪಾದನೆಯ ರೂಪದಲ್ಲಿ ಹೆಚ್ಚಾಗಿದೆ.
ಭಾರತೀಯ ನೌಕಾಪಡೆಯ ಮಹಾನಿರ್ದೇಶಕ ವಿ.ಎಸ್. ಪಠಾನಿಯಾ ಅವರು ಇತ್ತೀಚೆಗೆ ಪೋರಬಂದರ್ ಪ್ರದೇಶಕ್ಕೆ ಭೇಟಿ ನೀಡಿ ನೌಕಾಪಡೆಯ ಸನ್ನದ್ಧತೆಯನ್ನು ಪರಿಶೀಲಿಸಿದ್ದರು. ಅಲ್ಲದೆ, ಕರಾವಳಿ ಕಣ್ಗಾವಲಿಗೆ ಹೊಸ ಧ್ರುವ ಹೆಲಿಕಾಪ್ಟರ್ ಅನ್ನು ಸೇರ್ಪಡೆ ಮಾಡಿದ್ದರು.