ನವದೆಹಲಿ: ಸ್ವಾರ್ಥ ಪರ ಕೇಂದ್ರ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಕಡೆಗಣಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೋಮವಾರ ಆರೋಪಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ದೇಶದ ಜನತೆಗೆ ಶುಭ ಹಾರೈಸಿರುವ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸ್ನೇಹಿತರೇ, ಕಳೆದ 75 ವರ್ಷಗಳಲ್ಲಿ ನಾವು ಮಹತ್ತರ ಸಾಧನೆ ಮಾಡಿದ್ದೇವೆ. ಆದರೆ ಈಗಿನ ಸ್ವಾರ್ಥ ಪರ ಸರ್ಕಾರವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ, ಸಾಧನೆಯನ್ನು ಕಡೆಗಣಿಸುತ್ತಿದೆ. ಇದನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸೋನಿಯಾ ಗಾಂಧಿ ತಿರುಗೇಟು ನೀಡಿದ್ದಾರೆ.
ರಾಜಕೀಯ ಲಾಭಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ತಿರುಚಲು ಮುಂದಾಗಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.
1947ರಲ್ಲಿ ದೇಶ ವಿಭಜನೆಗೆ ಕಾರಣವಾದ ವಿಡಿಯೊವೊಂದನ್ನು ಬಿಡುಗಡೆಗೊಳಿಸಿದ್ದ ಬಿಜೆಪಿ, ಕಾಂಗ್ರೆಸ್ ಹಾಗೂ ಜವಾಹರಲಾಲ್ ನೆಹರೂ ಅವರನ್ನು ಗುರಿ ಮಾಡಿತ್ತು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಕರ್ನಾಟಕದ ಬಿಜೆಪಿ ಸರ್ಕಾರ ಅ.14 ರಂದು ಪ್ರಕಟಿಸಿದ ಜಾಹೀರಾತಿನಲ್ಲೂ ಜವಾಹರಲಾಲ್ ನೆಹರೂ ಅವರ ಭಾವಚಿತ್ರವನ್ನು ಕೈಬಿಟ್ಟಿತ್ತು.