ಬೀಜಿಂಗ್: ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ಉದ್ವಿಗ್ನತೆ ಭುಗಿಲೆದ್ದಿದ್ದು, ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಗೆ ಪ್ರತಿಕ್ರಿಯೆಯಾಗಿ "ಉದ್ದೇಶಿತ ಮಿಲಿಟರಿ ಕ್ರಮಗಳನ್ನು" ಪ್ರಾರಂಭಿಸುವುದಾಗಿ ಮಂಗಳವಾರ ಚೀನಾ ಸನ್ನದ್ಧವಾಗಿದೆ.
"ಚೀನಿ ಪೀಪಲ್ಸ್ ಲಿಬರೇಶನ್ ಆರ್ಮಿಯು ಹೆಚ್ಚಿನ ಎಚ್ಚರಿಕೆಯನ್ನು ಹೊಂದಿದ್ದು, ರಾಷ್ಟ್ರೀಯ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ರಕ್ಷಿಸಲು, ಬಾಹ್ಯ ಹಸ್ತಕ್ಷೇಪ ಹಾಗೂ ಪ್ರತ್ಯೇಕತಾವಾದಿ ಪ್ರಯತ್ನಗಳನ್ನು ದೃಢವಾಗಿ ತಡೆಯಲು ಉದ್ದೇಶಿತ ಮಿಲಿಟರಿ ಕಾರ್ಯಾಚರಣೆಗಳ ಸರಣಿಯನ್ನು ಪ್ರಾರಂಭಿಸಲಾಗುವುದು" ಎಂದು ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಯನ್ನು ಖಂಡಿಸಿ ನೀಡಿದ ಪ್ರಕಟಣೆಯಲ್ಲಿ ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ವು ಕಿಯಾನ್ ಅವರು ತಿಳಿಸಿದ್ದಾರೆ.
ಏತನ್ಮಧ್ಯೆ, ಚೀನಾದ ಯುದ್ಧ ವಿಮಾನಗಳು ತೈವಾನ್ ಜಲಸಂಧಿಯನ್ನು ದಾಟಿವೆ ಎಂದು ಬೀಜಿಂಗ್ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. "ಚೀನಾದ Su-35 ಫೈಟರ್ ಜೆಟ್‌ಗಳು ತೈವಾನ್ ಜಲಸಂಧಿಯನ್ನು ದಾಟುತ್ತಿವೆ" ಎಂದು ಸರ್ಕಾರಿ ಟಿವಿ ಸಿಜಿಟಿಎನ್ ವರದಿ ಮಾಡಿದೆ.
ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತಮ್ಮ ಏಷ್ಯಾ ಪ್ರವಾಸದ ಸಮಯದಲ್ಲಿ ತೈವಾನ್‌ಗೆ ಭೇಟಿ ನೀಡಿದರೆ ಅಮೆರಿಕ ಅದಕ್ಕೆ ಬೆಲೆ ತೆರೆಬೇಕಾಗುತ್ತದೆ" ಎಂದು ಚೀನಾ ಮಂಗಳವಾರ ಎಚ್ಚರಿಸಿತ್ತು. ಆದರೆ ಚೀನಾ ಸೇನೆ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ.
ತಮ್ಮದೇ ಪ್ರದೇಶವೆಂದು ಪರಿಗಣಿಸುವ ತೈವಾನ್‌ಗೆ ಪೆಲೋಸಿ ಭೇಟಿ ಬಗ್ಗೆ ಚೀನಾ ವ್ಯಗ್ರವಾಗಿದ್ದು, ಇಂದು ತೈವಾನ್ ಜಲಸಂಧಿ ಬಳಿಯ ಸಮುದ್ರದಲ್ಲಿ ಚೀನಾದ ಹಲವು ಯುದ್ಧನೌಕೆಗಳ ಸಂಚಾರ ಮತ್ತು ಯುದ್ಧ ವಿಮಾನಗಳ ಹಾರಾಟ ಇದ್ದುದ್ದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.