ವಿಶ್ವಸಂಸ್ಥೆ: ಭಾರತದಲ್ಲಿ ಬಾಲಶ್ರಮ, ಜಾತಿ ಆಧಾರಿತ ತಾರತಮ್ಯ ಮತ್ತು ಬಡತನ ನಿಕಟ ಸಂಬಂಧ ಹೊಂದಿವೆ ಎಂದು ವಿಶ್ವಸಂಸ್ಥೆಯ ಇತ್ತೀಚಿನ ವರದಿಯು ಹೇಳಿದೆ. ದಕ್ಷಿಣ ಏಶ್ಯಾದಲ್ಲಿನ ದಲಿತ ಮಹಿಳೆಯರಿಗೆ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಆಯ್ಕೆಗಳು ಮತ್ತು ಸ್ವಾತಂತ್ರವನ್ನು ವ್ಯವಸ್ಥಿತವಾಗಿ ನಿರಾಕರಿಸಲಾಗಿರುವ ತೀವ್ರ ತಾರತಮ್ಯ ಸೇರಿದಂತೆ ಗುಲಾಮಗಿರಿಯ ಸಮಕಾಲೀನ ರೂಪಗಳನ್ನು ವರದಿಯು ಎತ್ತಿ ತೋರಿಸಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ವಿಶೇಷ ವರದಿಗಾರ ಟೊಮೊಯು ಒಬೊಕಾಟಾ ಅವರು ಗುಲಾಮಗಿರಿಯ ಕಾರಣಗಳು ಮತ್ತು ಪರಿಣಾಮಗಳು ಸೇರಿದಂತೆ ಅದರ ಸಮಕಾಲೀನ ರೂಪಗಳ ಕುರಿತು ತನ್ನ ವರದಿಯಲ್ಲಿ,ಆಳವಾಗಿ ಬೇರೂರಿರುವ ತಾರತಮ್ಯವು ಇತರ ಹಲವಾರು ಅಂಶಗಳೊಂದಿಗೆ ಅಲ್ಪಸಂಖ್ಯಾತರನ್ನು ಕಾಡುತ್ತಿರುವ ಗುಲಾಮಗಿರಿಯ ಸಮಕಾಲೀನ ರೂಪಗಳಿಗೆ ಕಾರಣವಾಗಿವೆ ಎಂದು ಹೇಳಿದ್ದಾರೆ.
ಇವು ಹೆಚ್ಚಾಗಿ ಗುಲಾಮಗಿರಿ ಮತ್ತು ವಸಾಹತುಶಾಹಿ,ಆನುವಂಶಿಕ ಸ್ಥಾನ ವ್ಯವಸ್ಥೆಗಳು ಹಾಗೂ ಔಪಚಾರಿಕ ಮತ್ತು ಸರಕಾರಿ ಪ್ರಾಯೋಜಿತ ತಾರತಮ್ಯದ ಚಾರಿತ್ರಿಕ ಪರಂಪರೆಗಳ ಪರಿಣಾಮವಾಗಿವೆ ಎಂದು ವರದಿಯು ಹೇಳಿದೆ.
5ರಿಂದ 17 ವರ್ಷ ವಯಸ್ಸಿನ ಮಕ್ಕಳಲ್ಲಿ ಬಾಲ ಕಾರ್ಮಿಕ ಪದ್ಧತಿಯು ವಿಶ್ವದ ಎಲ್ಲ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿದೆ ಎಂದು ಬುಧವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಸಲ್ಲಿಸಿದ ತನ್ನ ವರದಿಯಲ್ಲಿ ಒಬೊಕಾಟಾ ಹೇಳಿದ್ದಾರೆ.
ಏಶ್ಯಾ ಮತ್ತು ಪೆಸಿಫಿಕ್,ಮಧ್ಯ ಪ್ರಾಚ್ಯ,ಅಮೆರಿಕ ಮತ್ತು ಯುರೋಪಗಳಲ್ಲಿ ಶೇ.4ರಿಂದ ಶೇ.6ರಷ್ಟು ಮಕ್ಕಳು ಬಾಲಶ್ರಮದಲ್ಲಿ ತೊಡಗಿಕೊಂಡಿದ್ದಾರೆ. ದ.ಆಫ್ರಿಕಾದಲ್ಲಿ ಇದು ಶೇ.21.6ರಷ್ಟು ಮತ್ತು ಉಪ ಸಹಾರನ್ ಆಫ್ರಿಕಾದಲ್ಲಿ ಶೇ.23.9ರ ಗರಿಷ್ಠ ಪ್ರಮಾಣದಲ್ಲಿದೆ.
ಭಾರತದಲ್ಲಿ ಬಾಲಶ್ರಮ,ಜಾತಿ ಆಧಾರಿತ ತಾರತಮ್ಯ ಮತ್ತು ಬಡತನ ನಿಕಟ ಸಂಬಂಧ ಹೊಂದಿವೆ. ಅಂಗೋಲಾ,ಕೋಸ್ಟಾರಿಕಾ,ಹೊಂಡುರಾಸ್ ಮತ್ತು ಕಝಖಸ್ತಾನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ಮತ್ತು ವಲಸಿಗ ಮಕ್ಕಳಲ್ಲಿಯೂ ಬಾಲಕಾರ್ಮಿಕ ಪದ್ಧತಿ ಅಸ್ತಿತ್ವದಲ್ಲಿದೆ ಎಂದು ವರದಿಯು ತಿಳಿಸಿದೆ.
ವ್ಯವಸ್ಥಿತ ತಾರತಮ್ಯವು ಇತರರೊಂದಿಗೆ ಸಮಾನವಾಗಿ ಘನತೆಯಿಂದ ಬದುಕುವ ಮತ್ತು ಮಾನವ ಹಕ್ಕುಗಳನ್ನು ಅನುಭವಿಸುವ ಪೀಡಿತ ವ್ಯಕ್ತಿಗಳು ಮತ್ತು ಸಮುದಾಯಗಳ ಸಾಮರ್ಥ್ಯದ ಮೇಲೆ ಆಳವಾದ ಪರಿಣಾಮಗಳನ್ನು ಹೊಂದಿದೆ. ಶೋಷಿತ ಸಮುದಾಯಗಳು ಹೆಚ್ಚಾಗಿ ರಾಷ್ಟ್ರಿಯ ನೀತಿಗಳು ಮತ್ತು ರಾಷ್ಟ್ರೀಯ ಮುಂಗಡಪತ್ರ ಹಂಚಿಕೆಗಳಲ್ಲಿ ಕಡೆಗಣಿಸಲ್ಪಡುತ್ತವೆ ಮತ್ತು ಅವುಗಳಿಗೆ ಗುಲಾಮಗಿರಿಯ ಸಮಕಾಲೀನ ರೂಪಗಳು ಸೇರಿದಂತೆ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ನ್ಯಾಯ ಮತ್ತು ಪರಿಹಾರವನ್ನು ಪಡೆಯುವ ಅವಕಾಶಗಳು ಸಾಮಾನ್ಯವಾಗಿ ಸೀಮಿತವಾಗಿರುತ್ತವೆ ಎಂದೂ ವರದಿಯು ಬೆಟ್ಟು ಮಾಡಿದೆ.
ಮಾಧ್ಯಮಗಳು,ಪಠ್ಯಪುಸ್ತಕಗಳು ಅಥವಾ ಅಂತರ್ಜಾಲದಲ್ಲಿ ನಕಾರಾತ್ಮಕ ಏಕತಾನತೆಯೊಂದಿಗೆ ಕೆಲವು ಸಮುದಾಯಗಳಿಗೆ ಕಳಂಕವನ್ನು ಶಾಶ್ವತಗೊಳಿಸಲಾಗುತ್ತಿದೆ ಮತ್ತು ಇದು ಅವುಗಳ ಅಧಿಕಾರಹೀನತೆಗೆ ತನ್ನ ಕೊಡುಗೆಯನ್ನು ನೀಡುತ್ತದೆ ಎಂದು ವರದಿಯು ಹೇಳಿದೆ.
ಕೆಲಸ ಮತ್ತು ಮೂಲದ ಆಧಾರದಲ್ಲಿ ತಾರತಮ್ಯಕ್ಕೊಳಗಾಗುವ ಜನರು ತಮ್ಮ ಆನುವಂಶಿಕ ಸ್ಥಾನಕ್ಕೆ ಬದ್ಧರಾಗಿರುತ್ತಾರೆ ಮತ್ತು ಮಾನವ ಘನತೆ ಹಾಗೂ ಸಮಾನತೆಗೆ ಯಾವುದೇ ಗೌರವವಿಲ್ಲದೆ ಅಸ್ಪಶ್ಯತೆಯಂತಹ ಅಮಾನವೀತೆಗೆ ಒಳಗಾಗುತ್ತಾರೆ. ಪರಿಣಾಮವಾಗಿ ಇಂತಹ ಜನರಿಗೆ ತಮ್ಮ ಪಾರಂಪರಿಕ ವೃತ್ತಿಗಳನ್ನು,ಅಗೌರವದ ಅಥವಾ ಅಪಾಯಕಾರಿ ಕೆಲಸಗಳನ್ನು ತೊರೆಯಲು ಸ್ವಾತಂತ್ರ ಸೀಮಿತವಾಗಿರುತ್ತದೆ ಮತ್ತು ನ್ಯಾಯ ಪಡೆಯಲು ಅವಕಾಶವಿಲ್ಲದೆ ಜೀತಕ್ಕೊಳಪಡುತ್ತಾರೆ ಎಂದು ವರದಿಯು ಹೇಳಿದೆ.
ವರ್ಗ,ಲಿಂಗ ಮತ್ತು ಧರ್ಮದಂತಹ ಹೆಚ್ಚುವರಿ ಛೇದಕ ಅಂಶಗಳೂ ಜಾತಿ ವಾಸ್ತವತೆಗಳಿಂದ ಪ್ರಭಾವಿತವಾಗಿವೆ. ದ.ಏಶ್ಯಾದಲ್ಲಿ ದಲಿತ ಮಹಿಳೆಯರು ತೀವ್ರ ತಾರತಮ್ಯವನ್ನು ಎದುರಿಸುತ್ತಿದ್ದಾರೆ, ಪರಿಣಾಮವಾಗಿ ಅವರಿಗೆ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಆಯ್ಕೆಗಳು ಮತ್ತು ಸ್ವಾತಂತ್ರವನ್ನು ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ ಎಂದಿರುವ ವರದಿಯು,ಕೆಲಸ ಮತ್ತು ಮೂಲದ ಆಧಾರದಲ್ಲಿ ತಾರತಮ್ಯಕ್ಕೊಳಗಾಗಿರುವ ಜನರು ಈಗಲೂ ಜೀತದಾಳು ಪದ್ಧತಿಯಡಿ ನಲುಗುತ್ತಿದ್ದಾರೆ ಎಂದು ಬೆಟ್ಟು ಮಾಡಿದೆ.