"ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ " ಎಂಬ ಮಾತು ಅಕ್ಷರಶಃ ನಿಜ. ನಮ್ಮ ಜೀವನ ಶೈಲಿ, ಆಹಾರ ಪದ್ಧತಿ, ವ್ಯಾಯಾಮ ಮುಖ್ಯವಾಗಿ ಮಾನಸಿಕ ಆರೋಗ್ಯವೇ ಅದಕ್ಕೆ ಕೀಲಿಕೈ. ಸಾಮಾನ್ಯವಾಗಿ ಆರೋಗ್ಯ ಎಂದಾಕ್ಷಣ ದೈಹಿಕ ಆರೋಗ್ಯವೆಂದೇ ಪರಿಗಣಿಸಿ ಅದಕ್ಕೆ ಆದ್ಯತೆ ಕೊಡುತ್ತೇವೆ. ವಾಸ್ತವದಲ್ಲಿ ಆರೋಗ್ಯವೆಂದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡರ ಸಂಪೂರ್ಣ ಸುಸ್ಥಿತಿ
ಇಂದಿನ ಗಡಿಬಿಡಿಯ ಜೀವನದಲ್ಲಿ ನಾವೆಲ್ಲ ಹೆಚ್ಚಾಗಿ ಕಳೆದುಕೊಳ್ಳುತ್ತಿರುವುದೇ ಮಾನಸಿಕ ಆರೋಗ್ಯ. ಮನಸ್ಸು ಸಂತೋಷವಾಗಿದ್ದರೆ ಮಾತ್ರ ಸೆರೊಟೋನಿನ್, ಎಂಡೋರ್ಫಿನ್ಸ್ ಮುಂತಾದ ಹ್ಯಾಪಿ ಹಾರ್ಮೋನ್ ಗಳು ದೇಹದಲ್ಲಿ ಉತ್ಪತ್ತಿಯಾಗುವುದು. ಅದರಿಂದ ಮಾತ್ರ ಖಿನ್ನತೆ ,ವ್ಯಾಕುಲತೆಗಳಿಂದ ನಾವು ದೂರ ಉಳಿಯಲು ಸಾಧ್ಯ. ಇದು ಪರೋಕ್ಷವಾಗಿ ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ.
ಮನಸ್ಸನ್ನು ಸಂತೋಷವಾಗಿಟ್ಟುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಶಾಂತಿಯ ವಾತಾವರಣ ಯಾವಾಗಲೂ ದೊರಕುವುದಿಲ್ಲ. ಸದಾ ಧ್ಯಾನ ಮಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನಮಗೆ "ಗಿಡಗಳು" ವರವೇ ಸರಿ. ಹೌದು, ಗಿಡಗಳಿಂದ- ಹಸಿರಿನಿಂದ ನಾವು ಅನೇಕ ಲಾಭ ಪಡೆಯುವುದು ಹೇಗೆ ಎಂದು ನೋಡೋಣ ಬನ್ನಿ.
ಗಿಡಗಳಿಂದ ಖಿನ್ನತೆ ಮತ್ತು ಒತ್ತಡದಿಂದ ಬಿಡುಗಡೆ ಹೊಂದಬಹುದು
ಗಿಡಗಳೊಂದಿನ ಒಡನಾಟದಿಂದ ಉತ್ಪತ್ತಿಯಾಗುವ ಸೆರೊಟೋನಿನ್ ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ ಹಾಗೂ ಒತ್ತಡ ಕಡಿಮೆ ಮಾಡುತ್ತದೆ. ನಮ್ಮ ಸುತ್ತಮುತ್ತ ಹೆಚ್ಚಾಗಿ ಹಸಿರನ್ನು ನೋಡುತ್ತಿದ್ದರೆ ನಾಡಿ ವ್ಯವಸ್ಥೆ ಶಾಂತಗೊಂಡು ಎದೆ ಬಡಿತ, ಬಿಪಿಯನ್ನು ಕಡಿಮೆ ಮಾಡುತ್ತದೆ. ಅದಕ್ಕೆ ನೋಡಿ ಡಾಕ್ಟರ್ಸ್ ಕೂಡ ಪಾರ್ಕಗಳಲ್ಲಿ ನಡೆದಾಡಲು, ಹಸಿರು ವಾತಾವರಣದಲ್ಲಿ ಕಾಲ ಕಳೆಯಲು ಸಲಹೆ ನೀಡುತ್ತಾರೆ.
ಗಾರ್ಡನಿಂಗ್ ಅಥವಾ ತೋಟಗಾರಿಕೆ ಒಂದು ಅತ್ಯುತ್ತಮ ಹವ್ಯಾಸ. ಈ ಹವ್ಯಾಸ ಕೂಡ ನಮ್ಮನ್ನು ಸಮಾಧಾನ ಚಿತ್ತದಿಂದ ಇರಲು ಸಹಾಯ ಮಾಡುತ್ತದೆ.
ಗಿಡಗಳಿಂದ ನಿಮ್ಮ ಏಕಾಗ್ರತೆ, ಸಾಮರ್ಥ್ಯತೆಯನ್ನು ಹೆಚ್ಚಿಸಿಕೊಳ್ಳಿ
ಹಸಿರಿನ ಮಧ್ಯ ಇರುವವರು ಶಾಂತಚಿತ್ತದಿಂದ ಇರುತ್ತಾರೆ. ಅವರಲ್ಲಿ ಏಕಾಗ್ರತೆ, ಕಲಿಕೆಯ ಸಾಮರ್ಥ್ಯತೆ ಹೆಚ್ಚಾಗುತ್ತದೆ. ಸಮಾಧಾನ ಚಿತ್ತದಿಂದ ಇರುತ್ತಾರೆ. ಇದನ್ನು ವಿಜ್ಞಾನವೇ ಸಾಬೀತುಪಡಿಸಿದೆ. ಸ್ಪಷ್ಟವಾಗಿ ಚಿಂತಿಸುವ ಶಕ್ತಿ ಹೆಚ್ಚಿಸಲು ಸಹಕರಿಸುತ್ತದೆ. ಈ ಸಂಗತಿಗಳನ್ನು ಅನೇಕ ಅಧ್ಯಯನಗಳು ದೃಢೀಕರಿಸಿರುವುದರಿಂದಲೇ ಅನೇಕ ಎಮ್ ಎನ್ ಸಿ ಕಂಪನಿಗಳು ತನ್ನ ಉದ್ಯೋಗಿಗಳ ಉತ್ತಮ ಆರೋಗ್ಯಕ್ಕಾಗಿ ಕಂಪನಿಯ ಕ್ಯಾಂಪಸ್ ನಲ್ಲೇ ಗಿಡಮರಗಳನ್ನು ಹೆಚ್ಚಾಗಿ ಬೆಳೆಸಿ ಹಸಿರನ್ನು ಉಣಲು ಅನುವು ಮಾಡಿಕೊಟ್ಟಿದೆ.
ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಉಪಶಮನಕ್ಕೂ ಪ್ರಯೋಜನಕಾರಿ
ಆಸ್ಪತ್ರೆಗಳಲ್ಲಿರುವ ರೋಗಿಗಳ ಪರಿಸರದಲ್ಲಿ ಹೆಚ್ಚಿನ ಗಿಡಗಳಿದ್ದಲ್ಲಿ ಅವರ ಚಿಕಿತ್ಸೆಯಲ್ಲಿ ಸಕಾರಾತ್ಮಕ ಫಲ ದೊರೆತಿರುವುದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಪೋಸ್ಟ್ ಟ್ರಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡ ರ್(PTSD) ರೋಗಿಗಳು ಉದ್ಯಾನಗಳಲ್ಲಿ ಸಮಯ ಕಳೆದಷ್ಟೂ ಅನುಕೂಲ.
ಮನೆಯೊಳಗಿನ ಗಾಳಿಯ ಗುಣಮಟ್ಟ ಹೆಚ್ಚಿಸುವುದರಲ್ಲಿ ಸಹಕಾರಿ
ಈಗಂತೂ ಅಲರ್ಜಿ, ಅಸ್ತಮಾ ಹಾವಳಿ ಹೆಚ್ಚಾಗಿದೆ. ಹೊರಗಿನ ಗಾಳಿಗಿಂತ ಮನೆಯೊಳಗಿನ ಗಾಳಿ ಹೆಚ್ಚು ಮಲಿನ ಗೊಂಡಿರುತ್ತದೆ ಎಂಬುದು ದುರಾದೃಷ್ಟದ ಸಂಗತಿ. ನೆಗಡಿ, ನೆಗಡಿಯಿಂದ ತಲೆನೋವು ಹೀಗೆ ಚಿಕ್ಕ ರೋಗ ಕೂಡ ಸುಸ್ತು ಮಾಡಿ ಮನಸ್ಸಿಗೂ ತ್ರಾಸ ಕೊಡುತ್ತದೆ.
ಇಂತಹ ಸಂದರ್ಭದಲ್ಲಿ ಮನೆಯೊಳಗೆ ಇರಿಸಬಹುದಾದ ಗಿಡಗಳನ್ನು ನಾವು ಉಪಯೋಗಿಸಿಕೊಂಡರೆ ಮನೆಯ ಸೌಂದರ್ಯ ಹೆಚ್ಚುವುದಷ್ಟೇ ಅಲ್ಲದೆ, ಅಶುದ್ಧ ಗಾಳಿಯನ್ನು ಪರಿಶುದ್ಧಗೊಳಿಸಿ, ಒಣ ಗಾಳಿಯಲ್ಲಿ ತೇವಾಂಶ ಹೆಚ್ಚಿಸಿ ಗಾಳಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ಮತ್ತೆ ತಡ ಯಾಕೆ?
ಅಲೋವೆರಾ, ನೀಲಗಿರಿ, ಪೀಸ್ ಲಿಲ್ಲಿ, ಸ್ನೇಕ್ ಪ್ಲಾಂಟ್, ಇಂಗ್ಲಿಷ್ ಐವಿ, ಲವೆಂಡರ್, ಜಾಸ್ಮಿನ್ ಮುಂತಾದ ಗಿಡಗಳನ್ನು ನಿಮ್ಮ ಮನೆಗೆ ಬರಮಾಡಿಕೊಳ್ಳಿ.
ಹಸಿರೇ ಉಸಿರು ಎಂಬುವುದು ಎಷ್ಟು ನಿಜ ನೋಡಿ. ಗಿಡಗಳಿಂದ ಇಷ್ಟೊಂದು ಪ್ರಯೋಜನಗಳಿದೆ ಎಂದಾದ ಮೇಲೆ ಅವುಗಳನ್ನು ಬೆಳೆಸಲು, ವರ್ಧಿಸಲು ಮನಹರಿಸೋಣ. ಸಾಧ್ಯವಾದಷ್ಟು ಗಿಡ ನೆಡೋಣ. ಗಿಡಗಳನ್ನು ನಮ್ಮ ಬಂಧು ಮಿತ್ರರಿಗೆ ಉಡುಗೊರೆ ರೂಪದಲ್ಲಿ ಕೊಟ್ಟು ಅವರ ಮನಸ್ಸಿನ ಆರೋಗ್ಯವೂ ವೃದ್ಧಿಸಲೆಂದು ಹಿತ ಕೋರೋಣ. ನಮ್ಮ ಮುಂದಿನ ಪೀಳಿಗೆಯವರ ಆರೋಗ್ಯಕ್ಕೂ ನೆರವಾಗೋಣ.
ಹಸಿರಿಗೆ ನಿಮ್ಮನ್ನು ಒಡ್ಡಿಕೊಳ್ಳಿ
ಗಿಡಗಳನ್ನು ಹೆಚ್ಚು ಬೆಳೆಸಿಕೊಳ್ಳಿ
ಮನಸ್ಸಿನ ಆರೋಗ್ಯವನ್ನು ವೃದ್ಧಿಸಿಕೊಳ್ಳಿ
ಮುಗುಳ್ನಗುವನ್ನು ಸದಾ ಉಳಿಸಿಕೊಳ್ಳಿ,,,