ರಾಂಚಿ: ಯುವತಿಯೊಬ್ಬಳು ತನ್ನ ಸ್ವಂತ ಕೃಷಿ ಭೂಮಿಯಲ್ಲಿ ಉಳುಮೆ ಮಾಡುವುದನ್ನು ಜಾರ್ಖಂಡ್ ನ ಸ್ಥಳೀಯ ಪಂಚಾಯಿತಿ ನಿಷೇಧಿಸಿದ್ದು, ಆಕೆಗೆ ದಂಡ ಕೂಡ ವಿಧಿಸಿ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಹೌದು.. ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದು ಯುವತಿಯೊಬ್ಬಳು ತನ್ನ ಸ್ವಂತ ಕೃಷಿ ಭೂಮಿಯಲ್ಲಿ ಉಳುಮೆ ಮಾಡುವುದನ್ನು "ನಿಷೇಧಿಸಿದ್ದು, ಮಾತ್ರವಲ್ಲದೇ ಭೂಮಿಯನ್ನು ಉಳುಮೆ ಮಾಡಲು ಟ್ರ್ಯಾಕ್ಟರ್ ಬಳಸಿದಾಗ ಆಕೆಗೆ ದಂಡ ವಿಧಿಸಿದೆ. ಜಿಲ್ಲೆಯ ದಾಹು ತೋಲಿ ಉಂಡೆ ಸಿಸೈ ಬ್ಲಾಕ್‌ನಿಂದ ಈ ಘಟನೆ ವರದಿಯಾಗಿದ್ದು, ಈ ಆದೇಶವನ್ನು ಧಿಕ್ಕರಿಸಿದರೆ ಆಕೆ ಮತ್ತು ಆಕೆಯ ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಲಾಗುತ್ತದೆ ಎಂದು ಪಂಚಾಯತ್ ಎಚ್ಚರಿಸಿದೆ.
ಸ್ಥಳೀಯ ನಿವಾಸಿಗಳು ಮಹಿಳೆ ಉಳುಮೆ ಮಾಡುವುದು ಈ ಪ್ರದೇಶದಲ್ಲಿ "ಸಾಂಕ್ರಾಮಿಕ ಅಥವಾ ಬರವನ್ನು ತರುವ ಕೆಟ್ಟ ಶಕುನ" ಎಂದು ಶಂಕಿಸಿದ್ದಾರೆ. ಇದೇ ಕಾರಣಕ್ಕೆ ಯುವತಿ ಮಂಜು ಓರಾನ್ ಳಿಗೆ ಉಳುಮೆ ಮಾಡಲು ಅವರು ಬಿಡುತ್ತಿಲ್ಲ ಎನ್ನಲಾಗಿದೆ.
ಮೂಲಗಳ ಪ್ರಕಾರ ಯುವತಿ ಮಂಜು ಓರಾನ್ ಸಂಸ್ಕೃತದಲ್ಲಿ ಪದವಿ ಪಡೆಯುತ್ತಿದ್ದು, ಈ ಪ್ರದೇಶದಲ್ಲಿ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಕೋವಿಡ್-ಪ್ರೇರಿತ ಲಾಕ್‌ಡೌನ್‌ನಿಂದ ಆಕೆ ತನ್ನ 10 ಎಕರೆ ಭೂಮಿಯನ್ನು ಉಳುಮೆ ಮಾಡುತ್ತಿದ್ದಾರೆ. ತನ್ನ ಕೃಷಿ ಆದಾಯದಿಂದ ಇತ್ತೀಚೆಗಷ್ಟೇ ಸೆಕೆಂಡ್ ಹ್ಯಾಂಡ್ ಟ್ರ್ಯಾಕ್ಟರ್ ಕೂಡ ಖರೀದಿಸಿದ್ದಾಳೆ. ಇದೇ ಟ್ರಾಕ್ಟರ್ ಸಹಾಯದಿಂದ ಕೂಲಿ ಆಳುಗಳ ನೆರವಿಲ್ಲದೇ ತನ್ನ ಭೂಮಿಯಲ್ಲಿ ತರಕಾರಿ ಬೆಳೆಯುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಯುವತಿ ಮಂಜು ಓರಾನ್, 'ಮಂಗಳವಾರದಂದು, ಪಂಚಾಯತ್‌ಗೆ ಹಾಜರಾಗಲು ನನ್ನನ್ನು ಕರೆಯಲಾಯಿತು, ಅಲ್ಲಿ ಅವರು ನನ್ನ ಭೂಮಿಯನ್ನು ಉಳುಮೆ ಮಾಡುವ ಬಗ್ಗೆ ನನ್ನನ್ನು ಪ್ರಶ್ನಿಸಿದರು, ಈ ಚಟುವಟಿಕೆಯು ಪುರುಷರಿಗೆ ಮಾತ್ರ ಮೀಸಲಾದ ಚಟುವಟಿಕೆಯಾಗಿದೆ ಎಂದು ಅವರು ಹೇಳಿದರು. ಮಹಿಳೆ ಉಳುಮೆ ಮಾಡುವುದರ ಕೆಟ್ಟ ಶಕುನದ ಬಗ್ಗೆ ನನಗೆ ತಿಳಿದಿದೆಯೇ ಎಂದು ಅವರು ನನ್ನನ್ನು ಕೇಳಿದರು ಎಂದು ಹೇಳಿದ್ದಾರೆ.
ಅಂತೆಯೇ ತಾನು ಎತ್ತುಗಳನ್ನು ಬಳಸುತ್ತಿಲ್ಲ.. ಬದಲಾಗಿ ಜೀವಂತವಲ್ಲದ ಯಂತ್ರವನ್ನು ಬಳಸುತ್ತಿದ್ದೇನೆ.. ಹೀಗಾಗಿ ಇಲ್ಲಿ ಕೆಟ್ಟ ಶುಕನದ ಮಾತೇ ಬರುವುದಿಲ್ಲ. ಆದರೆ ಇದು ಪಂಚಾಯತ್ ಸದಸ್ಯರಿಗೆ ಮನವರಿಕೆಯಾಗುತ್ತಿಲ್ಲ. ನಾನು ಇನ್ನು ಮುಂದೆ ನನ್ನ ಭೂಮಿಯನ್ನು ಉಳುಮೆ ಮಾಡುವಂತಿಲ್ಲ ಎಂದು ಅವರು ‘ಆದೇಶ’ ಮಾಡಿದ್ದಾರೆ. ಒಂದು ವೇಳೆ ಆದೇಶ ಮೀರಿ ನಾನು ಉಳುಮೆ ಮಾಡಿದರೆ, ನನ್ನ ಕುಟುಂಬದೊಂದಿಗೆ ನಾನು ಬಹಿಷ್ಕಾರಕ್ಕೆ ಒಳಗಾಗುತ್ತೇನೆ. ದಂಡವನ್ನೂ ವಿಧಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಅಲ್ಲದೆ ಪಂಚಾಯತ್ ಆದೇಶವನ್ನು ತಾವು ಒಪ್ಪುವುದಿಲ್ಲ ಎಂದು ಹೇಳಿದ ಯುವತಿ ಮಂಜು, ಪಂಚಾಯತ್ ಸಭೆಯಿಂದ ಹೊರಗೆ ನಡೆದಿದ್ದಾರೆ. ಇನ್ನು ಸಮಸ್ಯೆ ಬಗೆಹರಿಸಲು ಸ್ಥಳೀಯ ಆಡಳಿತ ಗ್ರಾಮ ಪಂಚಾಯಿತಿ ಸಭೆ ಕರೆದಿದೆ.
“ನಾನು ಅವರ ಮೂಢನಂಬಿಕೆಯ ವಿರುದ್ಧ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇನೆ. ದೇಶದ ಹಲವಾರು ಭಾಗಗಳಲ್ಲಿ ಮಹಿಳೆಯರು ಟ್ರ್ಯಾಕ್ಟರ್‌ಗಳ ಮೂಲಕ ತಮ್ಮ ಭೂಮಿಯನ್ನು ಉಳುಮೆ ಮಾಡುತ್ತಿದ್ದಾರೆ ಮತ್ತು ಅವರ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸುತ್ತಿದ್ದಾರೆ ಎಂದು ನಾನು ಅವರಿಗೆ ಹೇಳುತ್ತೇನೆ ”ಎಂದು ಸಿಸಾಯಿ ಪೊಲೀಸ್ ಠಾಣೆಯ ಅಧಿಕಾರಿ ಆದಿತ್ಯ ಚೌಧರಿ ಹೇಳಿದರು.