ನವದೆಹಲಿ: ರಾಷ್ಟ್ರಧ್ವಜ ಖರೀದಿಸುವಂತೆ ಪಡಿತರದಾರರನ್ನು ಅಂಗಡಿಯವರು ಒತ್ತಾಯಿಸುತ್ತಿದ್ದಾರೆ. ಬಿಜೆಪಿ 'ರಾಷ್ಟ್ರೀಯತೆ'ಯನ್ನು ಮಾರಾಟ ಮಾಡುತ್ತಿದ್ದು, ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ. ಆದರೆ, ತನ್ನ ಸೂಚನೆಯ ಮೇರೆಗೆ ಬಡವರು ಪಡಿತರಕ್ಕಾಗಿ ಧ್ವಜವನ್ನು ಖರೀದಿಸುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಆರೋಪವನ್ನು ಸರ್ಕಾರ ತಳ್ಳಿಹಾಕಿದೆ.
ಅಂತಹ ಯಾವುದೇ ಸೂಚನೆಯನ್ನು ನೀಡಲಾಗಿಲ್ಲ ಮತ್ತು ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿದ ಮತ್ತು ಸತ್ಯಗಳನ್ನು ತಪ್ಪಾಗಿ ನಿರೂಪಿಸಿದ ತಪ್ಪಿತಸ್ಥ ಪಡಿತರ ಅಂಗಡಿಯನ್ನು ಅಮಾನತುಗೊಳಿಸಲಾಗಿದೆ ಎಂದು ಫ್ರೆಸ್ ಇನ್ಪರ್ಮೇಷನ್ ಬ್ಯೂರೋ ತನ್ನ 'PIBFactCheck' ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ತ್ರಿವರ್ಣ ಧ್ವಜ ನಮ್ಮ ಹೆಮ್ಮೆ ಮತ್ತು ಅದು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದೆ ಎಂದು ರಾಹುಲ್ ಗಾಂಧಿ ಫೇಸ್ ಬುಕ್ ನಲ್ಲಿ ಹೇಳಿದ್ದಾರೆ. "ರಾಷ್ಟ್ರೀಯತೆಯನ್ನು ಎಂದಿಗೂ ಮಾರಲು ಸಾಧ್ಯವಿಲ್ಲ. ಪಡಿತರ ನೀಡುವಾಗ ಬಡವರಿಗೆ ತ್ರಿವರ್ಣ ಧ್ವಜಕ್ಕಾಗಿ 20 ರೂ. ಕೊಡುವಂತೆ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.