ಕಾಸರಗೋಡು: ಜಿಲ್ಲೆಯನ್ನು ತ್ಯಾಜ್ಯ ಮುಕ್ತವಾಗಿಸುವ ಯೋಜನೆಯನ್ವಯ ನಡೆಸಿದ ತಪಾಸಣೆಯಲ್ಲಿ ಮೂರು ಕೋಳಿ ಅಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಲಾಯಿತು. ಕಂದಾಯ ವಿಭಾಗಾಧಿಕಾರಿ ಅತುಲ್ ಸ್ವಾಮಿನಾಥ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು.
ಜಿಲ್ಲೆಯ ಐದು ಕೋಳಿ ಅಂಗಡಿಗಳಲ್ಲಿ ಆರ್‍ಡಿಓ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಚೆರ್ಕಳದ ಎವರೆಸ್ಟ್ ಚಿಕನ್ ಸೆಂಟರ್, ಮೀನುಮಾರುಕಟ್ಟೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಚೆಮ್ನಾಡ್ ಚಿಕನ್ ಸೆಂಟರ್ ಹಾಗೂ ಎಂಎಕೆ ಚಿಕನ್ ಸೆಂಟರ್ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಪತ್ತೆಹಚ್ಚಲಾಗಿದ್ದು, ಮೂರೂ ಅಂಗಡಿಗಳನ್ನು ತಕ್ಷಣದಿಂದ ಮುಚ್ಚಲು ಆದೇಶಿಸಲಾಗಿದೆ.
ಸೂಕ್ತ ಪರವಾನಗಿ ಪಡೆದ ನಂತರವೇ ಅಂಗಡಿಗಳನ್ನು ತೆರೆಯುವಂತೆ ಆದೇಶಿಸಲಾಗಿದೆ. ಜಿಲ್ಲಾ ಸಂಯೋಜಕಿ ಎ.ಲಕ್ಷ್ಮಿ, ಶುಚಿತ್ವ ಮಿಷನ್‍ನ ಕಿರಿಯ ಅಧೀಕ್ಷಕರು, ಡಿಎಲ್‍ಎಫ್‍ಎಂಸಿ ಸದಸ್ಯರು ಜೂನಿಯರ್ ಸೂಪರಿಂಟೆಂಡೆಂಟ್ ಪಿ.ವಿ.ಭಾಸ್ಕರನ್, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತ ಅನೀಶ್ ಆಂಟನಿ, ಆಹಾರ ಸುರಕ್ಷಣಾ ಪ್ರತಿನಿಧಿ ಕೆ.ಎಂ.ಮನ್ಸೂರ್, ಶುಚಿತ್ವ ಮಿಷನ್ ತಾಂತ್ರಿಕ ಸಲಹೆಗಾರ ಎಂ.ಎ.ಮುದಸ್ಸಿರ್ ತಪಾಸಣೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯಲ್ಲಿ ದಾಳಿ ಮುಂದುವರಿಯಲಿದ್ದು, ಅನಧಿಕೃತವಾಗಿ ನಡೆಯುತ್ತಿರುವ ಕೋಳಿ ಅಂಗಡಿಗಳ ತಪಾಸಣೆ ನಡೆಸಿ, ಕಠಿಣ ಕ್ರಮ ಹಾಗೂ ದಂಡ ವಿಧಿಸಲು ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಿಗೆ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.