ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದ ಬಳಿಕ ಅಲ್ಲಿ ಸೇರಿದ್ದ ಮಕ್ಕಳ ಜೊತೆ ಕೆಲ ಹೊತ್ತು ಸಂವಾದ ನಡೆಸಿದರು.
ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಮಕ್ಕಳು ಆಗಮಿಸಿದ್ದರು.
ಈ ಸಲ ಎನ್‌ಸಿಸಿ ಘಟಕದ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಮಕ್ಕಳು ತಮ್ಮ ರಾಜ್ಯಗಳ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು, ಭಾರತದ ಭೂಪಟ ಆಕಾರದ ರಚನೆಯಲ್ಲಿ ನಿಂತಿದ್ದರು. ಇದನ್ನು ಗಮನಿಸಿದ್ದ ಪ್ರಧಾನಿ ಅವರು ಭಾಷಣ ಮುಗಿಯುತ್ತಿದ್ದಂತೆ ಮಕ್ಕಳ ಕಡೆ ತೆರಳಿ ಅವರೊಂದಿಗೆ ಸಂವಾದ ನಡೆಸಿದರು.
ಎಲ್ಲ ರಾಜ್ಯಗಳ ಮಕ್ಕಳ ಜೊತೆ ಮಾತನಾಡಿದ ಪ್ರಧಾನಿ ಅವರು ನಿಂತ ಜಾಗದಲ್ಲೇ ದೇಶಾದ್ಯಂತ ಪ್ರವಾಸ ಕೈಗೊಂಡರು.
ಮೋದಿ ಅವರು ಇಲ್ಲಿಗೆ ಬಂದಿದ್ದು ಮಕ್ಕಳಿಗೂ ಹೆಮ್ಮೆಯ ಕ್ಷಣವಾಗಿತ್ತು. ಪಂಜಾಬ್ ಮಕ್ಕಳಿಂದ ಭಾಂಗ್ರಾ ಪ್ರದರ್ಶನ ಮಾಡಲು ಹೇಳಿ ತಾವು ಮಕ್ಕಳೊಂದಿಗೆ ಸಂಭ್ರಮಿಸಿದರು.