ನವದೆಹಲಿ: ಕರ್ನಾಟಕ ಮತ್ತು ಕೇರಳ ರಾಜ್ಯಗಳು ಇತರೆ ರಾಜ್ಯಗಳ ಲಾಟರಿಗಳ ಮೇಲೆ ತೆರಿಗೆ ವಿಧಿಸಲು ಶಾಸನಬದ್ಧ ಹಕ್ಕು ಹೊಂದಿವೆ ಎಂದು ಘೋಷಿಸಿದ ತನ್ನ ತೀರ್ಪನ್ನು ಮರುಪರಿಶೀಲಿಸಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಬಿ.ವಿ.ನಾಗರತ್ನ ಪೀಠವು, 'ಆದೇಶದ ಮರುಪರಿಶೀಲನೆಗೆ ಯಾವುದೇ ದೋಷ ಕಂಡು ಬಂದಿಲ್ಲ' ಎಂದು ಹೇಳಿದೆ.
ಆ.17ರ ಈ ಆದೇಶದಲ್ಲಿ ಮೇಘಾಲಯ ಸಲ್ಲಿಸಿದ ಮರುಪರಿಶೀಲನಾ ಅರ್ಜಿ ಮತ್ತು ಮುಕ್ತ ನ್ಯಾಯಾಲಯದ ವಿಚಾರಣೆಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು.
ಇತರೆ ರಾಜ್ಯಗಳು ನಡೆಸುವ ಲಾಟರಿಗಳ ಮೇಲೆ ತೆರಿಗೆ ವಿಧಿಸಲು ಆಯಾ ರಾಜ್ಯಗಳಿಗೆ ಶಾಸನಾತ್ಮಕ ಹಕ್ಕಿಲ್ಲ ಎಂದು ಹೈಕೋರ್ಟ್‌ಗಳು ಹೇಳುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
2022ರ ಮಾರ್ಚ್ 23ರ ತೀರ್ಪಿನಲ್ಲಿ ಇದೇ ಪೀಠವು ಕರ್ನಾಟಕ ಮತ್ತು ಕೇರಳ ರಾಜ್ಯಗಳು ತಮ್ಮ ಹೈಕೋರ್ಟ್‌ಗಳ ನಿರ್ಧಾರಗಳ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ಅಂಗೀಕರಿಸಿತ್ತು. ಈಶಾನ್ಯ ರಾಜ್ಯಗಳು ನಡೆಸುವ ಲಾಟರಿಗಳ ಮೇಲೆ ತೆರಿಗೆ ವಿಧಿಸುವ ಶಾಸನಬದ್ಧ ಹಕ್ಕು ಹೊಂದಿಲ್ಲ ಎಂದು ಈ ಕೋರ್ಟ್‌ಗಳು ಹೇಳಿದ್ದವು ಹಾಗೂ ಹಣ ಮರುಪಾವತಿಗೆ ಆದೇಶಿಸಿದ್ದವು. ಇದನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದರ ಮೇರೆಗೆ ಮೇಘಾಲಯ ಸರ್ಕಾರ ಈ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು.