ನವದೆಹಲಿ: ನಾಲ್ವರು ಕಾಂಗ್ರೆಸ್ ಸದಸ್ಯರ ಅಮಾನತು ನಿರ್ಧಾರವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೋಮವಾರ ಹಿಂಪಡೆದಿದ್ದಾರೆ.
ಸದನದೊಳಗೆ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಕ್ಕಾಗಿ ಕಳೆದ ಸೋಮವಾರ ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು.
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಸದನದಲ್ಲಿ ಅಂಗೀಕಾರವನ್ನು ಮಂಡಿಸಿದ ನಂತರ ಮಾಣಿಕಂ ಟಾಗೋರ್, ರಮ್ಯಾ ಹರಿದಾಸ್, ಟಿ. ಎನ್. ಪ್ರತಾಪನ್ ಮತ್ತು ಎಸ್. ಜ್ಯೋತಿಮಣಿ ಅವರ ಅಮಾನತನ್ನು ರದ್ದುಗೊಳಿಸಲಾಯಿತು.
ಅಮಾನತು ಹಿಂಪಡೆದ ನಂತರ, ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಬೆಲೆ ಏರಿಕೆಯ ಕುರಿತ ಚರ್ಚೆಗೆ ನಾಂದಿ ಹಾಡಿದರು.
ವಿರೋಧ ಪಕ್ಷಗಳ ಸದಸ್ಯರು ಎರಡೂ ಸದನಗಳಲ್ಲಿ ಸ್ಪೀಕರ್, ಸಭಾಪತಿ ಪೀಠಗಳ ಹತ್ತಿರ ಹೋಗಿ ಘೋಷಣಾ ಫಲಕ ಪ್ರದರ್ಶಿಸುವುದಿಲ್ಲ ಮತ್ತು ಸದನಗಳಲ್ಲಿ ಪ್ರತಿಭಟನೆ ನಡೆಸುವುದಿಲ್ಲವೆಂದು ಖಾತ್ರಿಪಡಿಸಿದರೆ ಮಾತ್ರ ಅಮಾನತು ಶಿಕ್ಷೆ ಹಿಂಪಡೆಯಬಹುದು ಎಂದು ಸರ್ಕಾರ ತಿಳಿಸಿತ್ತು.