ನವದೆಹಲಿ: ಕಳೆದ ಐದು ತಿಂಗಳಿಂದ ರಷ್ಯಾ ಮತ್ತು ಯೂಕ್ರೇನ್ ನಡುವೆ ಯುದ್ಧ ಮುಂದುವರಿದಿದೆ. ರಷ್ಯಾ ಸೇನೆಯ ಅಟ್ಟಹಾಸಕ್ಕೆ ನಲುಗಿರುವ ಯೂಕ್ರೇನ್ ಜನರು ಹೊಸ ಬದುಕು ಕಟ್ಟಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ಯುವ ಜೋಡಿಯೊಂದು ಪ್ರೀತಿಗೆ ಎಲ್ಲವನ್ನು ಗೆಲ್ಲುವ ಶಕ್ತಿ ಇದೆ ಎಂಬುದನ್ನು ನಿರೂಪಿಸಿದೆ.
ಯೂಕ್ರೇನ್ನಲ್ಲಿ ನೆಲೆಸಿರುವ ರಷ್ಯಾ ಮೂಲದ ಸೆರ್ಗೆಯ್ ನೋವಿಕೋವ್ ಯೂಕ್ರೇನ್ ಮೂಲದ ತನ್ನ ಗರ್ಲ್ಫ್ರೆಂಡ್ ಎಲೊನಾ ಬ್ರಾಮೊಕಾರನ್ನು ಭಾರತೀಯ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದಾರೆ. ಹಿಮಾಚಲ ಪ್ರದೇಶದ ಧರ್ಮಶಾಲದಲ್ಲಿರುವ ದಿವ್ಯಾ ಆಶ್ರಮ ಖರೊಟಾದಲ್ಲಿ ಸನತಾನ ಧರ್ಮ ಸಂಪ್ರದಾಯದ ಪ್ರಕಾರ ವಿವಾಹ ನೆರವೇರಿದೆ.
ವಿನೂತನ ಮದುವೆಯಲ್ಲಿ ಭಾಗಿಯಾಗಿದ್ದ ಸ್ಥಳೀಯರು ಎಲ್ಲ ರೀತಿಯ ಸ್ಥಳೀಯ ಸಂಪ್ರದಾಯವನ್ನು ವಿವಾಹ ಸಮಾರಂಭದ ವೇಳೆ ಪಾಲಿಸಿದ್ದಾರೆ. ಅಲ್ಲದೆ, ಹಿಮಾಚಲಿ ಜಾನಪದ ಸಂಪ್ರದಾಯದ ನೃತ್ಯವನ್ನು ಮಾಡಿ ಸಂಭ್ರಮಿಸಿದರು. ನವಜೋಡಿಗೆ ಒಂದು ಚೂರು ಕೊರತೆ ಬರದಂತೆ ಹಾಗೂ ಸ್ವಂತ ಮನೆ ಎಂಬ ಭಾವ ಬರುವಂತೆ ತುಂಬಾ ಅಚ್ಚುಕಟ್ಟಾಗಿ ಮದುವೆ ಸಮಾರಂಭವನ್ನು ಮಾಡಿಕೊಡಲಾಯಿತು.
ಸೆರ್ಗೆಯ್ ನೋವಿಕೋವ್ ಮತ್ತು ಎಲೊನಾ ಬ್ರಾಮೊಕಾ ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವರ್ಷದ ತಮ್ಮ ತವರಿನಲ್ಲೇ ಮದುವೆ ಆಗಬೇಕೆಂದು ನಿರ್ಧರಿಸಿದ್ದಾರೆ. ಆದರೆ, ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧದ ಕಾರಣ ಭಾರತದ ಧರ್ಮಶಾಲವನ್ನು ಮದುವೆಗಾಗಿ ಈ ಜೋಡಿ ಆಯ್ದುಕೊಂಡಿತು.
ಇಬ್ಬರೂ ಕಳೆದ ವರ್ಷದಿಂದ ಧರ್ಮಶಾಲಾ ಸಮೀಪವಿರುವ ಧರ್ಮಕೋಟ್‌ನಲ್ಲಿ ವಾಸಿಸುತ್ತಿದ್ದರು ಎಂದು ದಿವ್ಯ ಆಶ್ರಮ ಖರೋಟಾದ ಪಂಡಿತ್ ಸಂದೀಪ್ ಶರ್ಮಾ ಮಾಧ್ಯಮಕ್ಕೆ ತಿಳಿಸಿದ್ದಾರೆ. ನಮ್ಮ ಪಂಡಿತ್ ರಮಣ್ ಶರ್ಮಾ ಅವರು ಯುವ ಜೋಡಿಯ ವಿವಾಹವನ್ನು ನೆರವೇರಿಸಿದರು ಮತ್ತು ಸನಾತನ ಧರ್ಮದ ಸಂಪ್ರದಾಯಗಳ ಪ್ರಕಾರ ನಡೆದ ಮದುವೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು ಎಂದು ಸಂದೀಪ್ ಶರ್ಮಾ ಹೇಳಿದರು.
ಧರ್ಮಶಾಲಕ್ಕೆ ಪ್ರವಾಸ ಬಂದಿದ್ದ ವಿದೇಶಿಗರು ಕೂಡ ಮದುವೆ ಸಮಾರಂಭಕ್ಕೆ ಸಾಕ್ಷಿಯಾದರು ಮತ್ತು ಅಪರೂಪದ ವಿವಾಹ ಕಾರ್ಯಕ್ರಮವನ್ನು ಎಂಜಾಯ್ ಮಾಡಿದರು.