ನವದೆಹಲಿ :ಆಗಸ್ಟ್ ಮತ್ತು ಸೆಪ್ಟಂಬರ್ನಲ್ಲಿ ದೇಶದಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ ಎಂದು ಸೋಮವಾರ ತಿಳಿಸಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು,ಒಟ್ಟಾರೆಯಾಗಿ ಉತ್ತಮ ಬೆಳೆ ಇಳುವರಿಯನ್ನು ಬೆಟ್ಟು ಮಾಡಿದೆ. ಭಾರತವು ತನ್ನ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಕೃಷಿಯನ್ನು ಅವಲಂಬಿಸಿದೆ.
ಜೂನ್ನಿಂದ ಆರಂಭಗೊಳ್ಳುವ ನಾಲ್ಕು ತಿಂಗಳ ಮಳೆಗಾಲಕ್ಕಾಗಿ 50 ವರ್ಷಗಳ ಸರಾಸರಿ 89 ಸೆಂ.ಮೀ.(34 ಇಂಚು)ನ ಶೇ.96ರಿಂದ ಶೇ.104ರ ನಡುವಿನ ಪ್ರಮಾಣವನ್ನು ಸಾಮಾನ್ಯ ಮಳೆಯೆಂದು ಐಎಂಡಿ ವ್ಯಾಖ್ಯಾನಿಸಿದೆ.
ಆದರೆ ಪೂರ್ವಭಾರತದ ಭತ್ತವನ್ನು ಬೆಳೆಯುವ ಕೆಲವು ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಬಹುದು ಎಂದು ಐಎಂಡಿಯ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರಾ ಅವರು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೂನ್ ತಿಂಗಳಿನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಶೇ.8ರಷ್ಟು ಕಡಿಮೆ ಮತ್ತು ಜುಲೈನಲ್ಲಿ ಸಾಮಾನ್ಯಕ್ಕಿಂತ ಶೇ.17ರಷ್ಟು ಹೆಚ್ಚು ಮಳೆಯಾಗಿದ್ದು,ಇದು ಉತ್ತಮ ಬೆಳೆ ಇಳುವರಿಯ ಸಾಧ್ಯತೆಯನ್ನು ಹೆಚ್ಚಿಸಿದೆ ಎಂದರು.
ಭಾರತವು ವಿಶ್ವದ ಅತ್ಯಂತ ದೊಡ್ಡ ಅಕ್ಕಿ ರಫ್ತು ರಾಷ್ಟ್ರವಾಗಿದ್ದು,ಮುಂಗಾರು ಮಳೆಯು ದೇಶದ ಭತ್ತದ ಇಳುವರಿಯ ಪ್ರಮಾಣವನ್ನು ನಿರ್ಧರಿಸುತ್ತದೆ.