ನವದೆಹಲಿ: ದೂರುದಾರರು ಪ್ರಚೋದನಕಾರಿ ಉಡುಗೆ ತೊಟ್ಟಿರುವುದರಿಂದ ಇದನ್ನು ಲೈಂಗಿಕ ಕಿರುಕುಳ ಪ್ರಕರಣ ಎಂದು ಪರಿಗಣಿಸಲು ಆಗುವುದಿಲ್ಲ. ಪ್ರಾಥಮಿಕವಾಗಿ ಈ ಪ್ರಕರಣವು ನಿಲ್ಲುವುದಿಲ್ಲ ಎಂದಿರುವ ಕೇರಳದ ನ್ಯಾಯಾಲಯ, ಖ್ಯಾತ ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ ಸಿವಿಕ್ ಚಂದ್ರನ್‌ಗೆ ಬುಧವಾರ ಜಾಮೀನು ಮಂಜೂರು ಮಾಡಿದೆ.
ಸಾಮಾಜಿಕ ಕಾರ್ಯಕರ್ತ ಮತ್ತು ಲೇಖಕರಾಗಿರುವ ಚಂದ್ರನ್ ಅವರು 2020ರ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಚಂದ್ರನ್ ಅವರು 2020ರ ಫೆಬ್ರುವರಿ 8 ರಂದು ನಂಗಿ ಬೀಚ್‌ನಲ್ಲಿರುವ ಶಿಬಿರದಲ್ಲಿ ಏಕಾಂತ ಸ್ಥಳಕ್ಕೆ ಕರೆದೊಯ್ದು ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಯುವ ಬರಹಗಾರ್ತಿ ಆರೋಪಿಸಿದ್ದರು.
ತನ್ನ ಆದೇಶವನ್ನು ಕಾಯ್ದಿರಿಸಿರುವ ಕೋಯಿಕ್ಕೋಡ್ ಸೆಷನ್ಸ್ ಕೋರ್ಟ್, ದೂರುದಾರರು ಲೈಂಗಿಕ ಪ್ರಚೋದನಕಾರಿ ಉಡುಪುಗಳನ್ನು ಧರಿಸಿರುವುದರಿಂದ, ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354A ಅಡಿಯಲ್ಲಿ ಅಪರಾಧ ನಿಲ್ಲಲು ಸಾಧ್ಯವಿಲ್ಲ ಎಂದು ಹೇಳಿದೆ.
ಆರೋಪಿ ಸಿವಿಕ್ ಚಂದ್ರನ್ ಅವರು ಜಾಮೀನು ಅರ್ಜಿಯೊಂದಿಗೆ ಸಲ್ಲಿಸಿರುವ ಛಾಯಾಚಿತ್ರಗಳನ್ನು ಗಮನಿಸಿದರೆ, ದೂರುದಾರರು ಸ್ವತಃ ಲೈಂಗಿಕವಾಗಿ ಪ್ರಚೋದಿಸುವ ಬಟ್ಟೆಗಳನ್ನು ಧರಿಸಿದ್ದರು ಎಂದು ತೋರುತ್ತದೆ ಎಂದಿರುವ ಕೋರ್ಟ್, ಸಿವಿಕ್ ಚಂದ್ರನ್ ಅವರಿಗೆ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ನ್ಯಾಯಮೂರ್ತಿ ಎಸ್ ಕೃಷ್ಣಕುಮಾರ್, 'ದೈಹಿಕ ಸಂಪರ್ಕವಿದೆ ಎಂದು ಒಪ್ಪಿಕೊಂಡರೂ ಸಹ, 74 ವರ್ಷ ವಯಸ್ಸಿನ ಮತ್ತು ದೈಹಿಕವಾಗಿ ವಿಕಲಚೇತನ ವ್ಯಕ್ತಿ, ವ್ಯಕ್ತಿಯೊಬ್ಬರನ್ನು ಬಲವಂತವಾಗಿ ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಲೈಂಗಿಕ ಕಿರುಕುಳ ನೀಡಬಹುದು ಎಂಬುದನ್ನು ನಂಬಲು ಅಸಾಧ್ಯ' ಎಂದು ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ, ಕೊಯಿಲಾಂಡಿ ಪೊಲೀಸರು ಈ ವರ್ಷದ ಜುಲೈ 29 ರಂದು ಐಪಿಸಿ ಸೆಕ್ಷನ್ 354A (2), 341 ಮತ್ತು 354 ರ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಆರೋಪಿ ಪರ ವಾದಿಸಿದ ವಕೀಲರು, ಈ ಪ್ರಕರಣ 'ಸುಳ್ಳು' ಮತ್ತು ಆರೋಪಿಯ ಶತ್ರುಗಳು ಅವರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. 2020ರಲ್ಲಿ ಅಪರಾಧ ನಡೆದಿದ್ದರೆ ಪ್ರಕರಣವನ್ನು ದಾಖಲಿಸಲು ಎರಡು ವರ್ಷಗಳಿಗಿಂತ ಹೆಚ್ಚು ಸಮಯ ಏಕೆ ಬೇಕಾಯಿತು ಎಂದು ಪ್ರಶ್ನಿಸಿದ್ದಾರೆ.
ಸದ್ಯ ನ್ಯಾಯಾಧೀಶ ಎಸ್ ಕೃಷ್ಣಕುಮಾರ್ ಅವರು ತಮ್ಮ ತೀರ್ಪಿನ ಪ್ರತಿಯಲ್ಲಿ ಉಲ್ಲೇಖಿಸಿರುವ ಈ ಹೇಳಿಕೆಗಳು ಕೇರಳದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿವೆ.