ನವದೆಹಲಿ: ಖ್ಯಾತ ವಿಜ್ಞಾನಿ ಸಮೀರ್ ವಿ.ಕಾಮತ್ ಅವರು ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮುಖ್ಯಸ್ಥ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ರಕ್ಷಣಾ ಸಚಿವಾಲಯವು ಈ ಸಂಬಂಧ ಗುರುವಾರ ಆದೇಶ ಹೊರಡಿಸಿದೆ.
ಕಾಮತ್ ಅವರು ಈ ಮೊದಲು ಡಿಆರ್‌ಡಿಒದ ನೌಕಾ ವ್ಯವಸ್ಥೆ ಮತ್ತು ಸರಕು ವಿಭಾಗದ ಮಹಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಡಿಆರ್‌ಡಿಒ ಮುಖ್ಯಸ್ಥರಾಗಿದ್ದ ಸತೀಶ್ ರೆಡ್ಡಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವೈಜ್ಞಾನಿಕ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಕಾಮತ್ ನೇಮಕಗೊಂಡಿದ್ದಾರೆ.
'ಸಂಪುಟದ ನೇಮಕಾತಿ ಸಮಿತಿಯು (ಎಸಿಸಿ) ಕಾಮತ್ ಅವರ ನೇಮಕಕ್ಕೆ ಒಪ್ಪಿಗೆ ಸೂಚಿಸಿದೆ. ಅಧಿಕಾರ ಸ್ವೀಕರಿಸಿದ ದಿನದಿಂದ 60 ವರ್ಷ ವಯಸ್ಸಾಗುವವರೆಗೂ ಕಾಮತ್ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ' ಎಂದು ಆದೇಶದಲ್ಲಿ ತಿಳಿಸಲಾಗಿದೆ.
'ಸತೀಶ್ ರೆಡ್ಡಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವೈಜ್ಞಾನಿಕ ಸಲಹೆಗಾರರನ್ನಾಗಿ ನೇಮಿಸುವ ನಿರ್ಣಯಕ್ಕೂ ಸಂಪುಟ ಸಮಿತಿ ಅನುಮೋದನೆ ನೀಡಿದೆ' ಎಂದೂ ಹೇಳಲಾಗಿದೆ.
ರೆಡ್ಡಿ ಅವರನ್ನು 2018ರ ಆಗಸ್ಟ್‌ನಿಂದ 2020ರ ಆಗಸ್ಟ್‌ವರೆಗೂ ಡಿಆರ್‌ಡಿಒ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಬಳಿಕ ಅವರ ಸೇವಾವಧಿಯನ್ನು ಮತ್ತೆರಡು ವರ್ಷ ವಿಸ್ತರಿಸಲಾಗಿತ್ತು.