ನವದೆಹಲಿ: ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತೊರೆದು, ಪಕ್ಷದ ನಾಯಕತ್ವವನ್ನು ಟೀಕೆ ಮಾಡಿ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ನಿನ್ನೆ ಮೊನ್ನೆವರೆಗೆ ನಾಯಕರ ಚಪ್ರಾಸಿ (ಪ್ಯೂನ್, ಸೇವಕ)ಗಳಾಗಿದ್ದವರು, ಪಕ್ಷಕ್ಕೆ ತಿಳಿವಳಿಕೆ ನೀಡುತ್ತಿರುವುದು ನೋಡಿದರೆ, ನಗು ಬರುತ್ತದೆ' ಎಂದು ಕಾಂಗ್ರೆಸ್‌ನ ನಾಯಕ, ಸಂಸದ ಮನೀಶ್ ತಿವಾರಿ ಹೇಳಿದ್ದಾರೆ.
' ಪಕ್ಷದ ಪರಿಸ್ಥಿತಿ ಚಿಂತಾಜನಕವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ಎರಡು ವರ್ಷಗಳ ಹಿಂದೆ 23 ನಾಯಕರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದೇವೆ. ಆ ಪತ್ರದ ನಂತರ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ ಮತ್ತು ಭಾರತ ವಿಭಿನ್ನವಾಗಿ ಯೋಚಿಸಲು ಆರಂಭಿಸಿವೆ' ಎಂದು ಸಂಸದ ಮನೀಶ್ ತಿವಾರಿ ಹೇಳಿದರು.
ಕಾಂಗ್ರೆಸ್ ತೊರೆದಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು, ಸೋನಿಯಾ ಗಾಂಧಿ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿಯವರನ್ನು ಟೀಕಿಸಿದ್ದರು. ರಾಹುಲ್ ಅವರ ಅಪ್ರಬುದ್ಧತೆ ಮತ್ತು ಬಾಲಿಶ ಕ್ರಮಗಳು ಕಾಂಗ್ರೆಸ್ ಅನ್ನು ಸಂಪೂರ್ಣ ನಾಶ ಮಾಡಿವೆ ಎಂದು ಅವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮನೀಶ್ ತಿವಾರಿ ಶನಿವಾರ ಮಾತನಾಡಿದ್ದಾರೆ.
'ಆಜಾದ್ ಅವರ ಪತ್ರಕ್ಕಿರುವ ಯೋಗ್ಯತೆ ಬಗ್ಗೆ ನಾನು ಮಾತನಾಡಲಾರೆ. ಪತ್ರ ಯಾಕೆ ಮತ್ತು ಅದರ ಸಂದರ್ಭದ ಬಗ್ಗೆ ವಿವರಿಸಲು ಅವರೇ ಸೂಕ್ತರು. ಆದರೆ, ಪತ್ರ ಈಗ ಬಹಿರಂಗವಾಗಿದೆ. ಸ್ವತಃ ಪತ್ರವೇ ಎಲ್ಲವನ್ನೂ ಮಾತನಾಡುತ್ತಿದೆ' ಎಂದು ಸಂಸದ ತಿವಾರಿ ಹೇಳಿದ್ದಾರೆ.
'ಆದರೆ, ಒಂದು ವಾರ್ಡ್ ಚುನಾವಣೆಯಲ್ಲಿ ಹೋರಾಡುವ ಸಾಮರ್ಥ್ಯವಿಲ್ಲದವರು, ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಮಾತನಾಡಲಾಗದವರು, ನಿನ್ನೆಯವರೆಗೆ ಕಾಂಗ್ರೆಸ್ ನಾಯಕರ 'ಚಪ್ರಾಸಿ'ಗಳಾಗಿದ್ದವರು (ಪ್ಯೂನ್), ಪಕ್ಷಕ್ಕೆ ತಿಳಿವಳಿಕೆ ನೀಡುತ್ತಿರುವುದು ಮೂರ್ಖತನ. ಇದು ನಗು ತರಿಸುವ ವಿಷಯ' ಎಂದರು.
'ಪಕ್ಷವು ಗಂಭೀರ ಸ್ಥಿತಿಯಲ್ಲಿದೆ. ವಿಷಾದನೀಯ, ದುರದೃಷ್ಟಕರ ಎನಿಸುವ ಇಂಥ ಸಂಗತಿಗಳನ್ನು ಬಹುಶಃ ತಪ್ಪಿಸಬಹುದಿತ್ತು ಎಂದು ನಾನು ಭಾವಿಸುತ್ತೇನೆ' ಎಂದೂ ತಿವಾರಿ ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಜಿ -23 ನಾಯಕರು ಸೋನಿಯಾ ಗಾಂಧಿ ಅವರಿಗೆ ಪಕ್ಷದ ಕುರಿತು ಬರೆದ ಪತ್ರವನ್ನು ತಿವಾರಿ ನೆನಪಿಸಿಕೊಂಡರು. 'ಭಾರತ ಮತ್ತು ಕಾಂಗ್ರೆಸ್ ನಡುವೆ ಈಗ ಬಿರುಕು ಮೂಡಿದೆ. ಏಕೆಂದರೆ ಇವೆರಡೂ ಮೊದಲಿನಂತೆ ಒಂದೇ ರೀತಿ ಯೋಚಿಸುತ್ತಿಲ್ಲ. ಎರಡೂ ಭಿನ್ನವಾಗಿ ಯೋಚಿಸುತ್ತಿವೆ. ಪಕ್ಷವು ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಸೋತಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.
'ಪಕ್ಷದ ಬಲವರ್ದನೆಗಾಗಿ ಆತ್ಮಾವಲೋಕನೆಯ ಅಗತ್ಯವಿತ್ತು. 2020ರ ಡಿಸೆಂಬರ್ 20 ರಂದು ಸೋನಿಯಾ ಗಾಂಧಿಯವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾದಂತೆ ಒಗ್ಗಟ್ಟು ಮೂಡಿಸುವ ಕೆಲಸ ಕಾರ್ಯಗತವಾಗಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ' ಎಂದು ಅವರು ಹೇಳಿದರು.
ಮನೀಶ್ ತಿವಾರಿ ಅವರು ಕಾಂಗ್ರೆಸ್ ಪಕ್ಷದ ನಿಲುವುಗಳಿಗೆ ಭಿನ್ನವಾದ ಅಭಿಪ್ರಾಯ ಹೊಂದಿರುವ ನಾಯಕರೂ ಹೌದು.