ನವದೆಹಲಿ:ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಗೋದಿ ಹಿಟ್ಟು,ಮೈದಾ, ರವೆ ಮತ್ತು ತವುಡು ತೆಗೆಯದ ಗೋದಿ ಹಿಟ್ಟಿನ ರಫ್ತನ್ನು ನಿಷೇಧಿಸಿ ಶನಿವಾರ ಆದೇಶಿಸಿದೆ.
ಮಾರ್ಚ್ನಿಂದ ತೀವ್ರ ಉಷ್ಣ ಮಾರುತದಿಂದಾಗಿ ಇಳುವರಿ ಕುಸಿದಿದ್ದರಿಂದ ಮತ್ತು ದೇಶಿಯ ಬೆಲೆಗಳು ಸಾರ್ವಕಾಲಿಕ ಎತ್ತರವನ್ನು ತಲುಪಿದ ಬಳಿಕ ಭಾರತವು ಕಳೆದ ಮೇ ತಿಂಗಳಿನಲ್ಲಿ ಗೋದಿಯ ರಫ್ತನ್ನು ನಿಷೇಧಿಸಿತ್ತು.
ಯುದ್ಧಕ್ಕಿಂತ ಮುನ್ನ ರಶ್ಯಾ ಮತ್ತು ಉಕ್ರೇನ್ ಜಾಗತಿಕ ಗೋದಿ ರಫ್ತುಗಳಲ್ಲಿ ಮೂರನೇ ಒಂದು ಪಾಲನ್ನು ಹೊಂದಿದ್ದವು. ಮಾರುಕಟ್ಟೆ ಕೊರತೆಯನ್ನು ತುಂಬುವ ಆಶಯವನ್ನು ಹೊಂದಿದ್ದ ಭಾರತವು 2022-23ರಲ್ಲಿ ಒಂದು ಕೋಟಿ ಟನ್ ಗೋದಿಯನ್ನು ರಫ್ತು ಮಾಡಲು ಉದ್ದೇಶಿಸಿದ್ದೇನೆ ಎಂದು ಹೇಳಿತ್ತು.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಆಗಸ್ಟ್ 2022ರಲ್ಲಿ ಭಾರತದಾದ್ಯಂತ ಗೋದಿಯ ಸರಾಸರಿ ಚಿಲ್ಲರೆ ಮಾರಾಟ ಬೆಲೆಯು ಪ್ರತಿ ಕೆ.ಜಿ.ಗೆ 25.41ರೂ.ಗಳಿಂದ ಶೇ.22ರಷ್ಟು ಏರಿಕೆಯಾಗಿ ಪ್ರತಿ ಕೆ.ಜಿ.ಗೆ 31.04 ರೂ.ಗೆ ತಲುಪಿದೆ. ಗೋದಿ ಹಿಟ್ಟಿನ ಸರಾಸರಿ ಚಿಲ್ಲರೆ ಮಾರಾಟ ಬೆಲೆಯು ಹಿಂದಿನ ಪ್ರತಿ ಕೆ.ಜಿ.ಗೆ 30.04 ರೂ.ಗಳಿಂದ ಶೇ.17ರಷ್ಟು ಏರಿಕೆಯಾಗಿ ಪ್ರತಿ ಕೆ.ಜಿ.ಗೆ 35.17 ರೂ.ಗೆ ತಲುಪಿದೆ.
ಈ ನಡುವೆ ರೋಲರ್ ಫ್ಲೋರ್ ಮಿಲ್ಲರ್ಸ್ ಫೆಡರೇಷನ್ ಕಳೆದ ಕೆಲವು ದಿನಗಳಿಂದ ಗೋದಿಯ ಅಲಭ್ಯತೆ ಮತ್ತು ಬೆಲೆ ಏರಿಕೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದೆ.
ತನ್ನ ಮೀಸಲು ದಾಸ್ತಾನು ಪ್ರಮಾಣವು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಭಾರತವು
ಗೋದಿಯನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ ಎಂಬ ವರದಿಗಳನ್ನು ಸರಕಾರವು ಆ.21ರಂದು
ತಿರಸ್ಕರಿಸಿತ್ತು.