ನವದೆಹಲಿ: ಗುಜರಾತ್‌ನ ಪ್ರಸಿದ್ಧ ಸಾಂಪ್ರದಾಯಿಕ ನೃತ್ಯವಾಗಿರುವ ಗರ್ಬಾ ಇದೀಗ ಯುನೆಸ್ಕೋದ (ಯುನೈಟೆಡ್ ನೇಷನ್ಸ್ ಎಜುಕೇಷನಲ್ ಸೈಂಟಿಫಿಕ್ ಅಂಡ್ ಕಲ್ಚರಲ್ ಆರ್ಗನೈಸೇಶನ್-ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಯಲ್ಲಿ ಸೇರಲು ನಾಮನಿರ್ದೇಶನಗೊಂಡಿದೆ.
ಇದಾಗಲೇ ರಾಮಲೀಲಾ, ವೇದ ಪಠಣಗಳು, ಕುಂಭಮೇಳ, ಕೋಲ್ಕತಾದ ದುರ್ಗಾ ಪೂಜೆ ಸೇರಿದಂತೆ ಭಾರತದ 13 ವಿಶೇಷ ಆಚರಣೆಗಳಿಗೆ ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಾನಮಾನ ದೊರೆತಿದೆ. ಒಂದು ವೇಳೆ ಗರ್ಬಾ ಈ ಪಟ್ಟಿಗೆ ಸೇರಿದರೆ 14ನೇ ಸ್ಥಾನವನ್ನು ಪಡೆದುಕೊಳ್ಳಲಿದೆ.
ಈ ಕುರಿತು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಕಾರ್ಯದರ್ಶಿ ಟಿಮ್ ಕರ್ಟಿಸ್ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಕೋಲ್ಕತಾದ ದುರ್ಗಾ ಪೂಜಾ ಉತ್ಸವಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಾನಮಾನ ನೀಡಿರುವುದಾಗಿ ಘೋಷಿಸಿತ್ತು. ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ ದುರ್ಗಾ ಪೂಜೆಗೆ ವಿಶೇಷ ಮನ್ನಣೆ ದೊರೆಯುವ ಮೂಲಕ ಭಾರತಕ್ಕೆ ಗೌರವ ಪ್ರದಾನ ಮಾಡಲಾಗಿತ್ತು.
ಇದೀಗ ಗರ್ಬಾ ನೃತ್ಯ ಈ ಪಟ್ಟಿಗೆ ಸೇರ್ಪಡೆಗೊಳ್ಳಲಿದೆ. ಮುಂದಿನ ವರ್ಷಕ್ಕೆ ಇದನ್ನು ಪರಿಗಣಿಸಲಾಗುವುದು ಎಂದು ಅವರು ಹೇಳಿದ್ದಾರೆ. ನಾಮ ನಿರ್ದೇಶನದ ಕಡತಗಳನ್ನು ಮೌಲ್ಯಮಾಪನ ಸಂಸ್ಥೆಯು 2023 ರ ಮಧ್ಯಭಾಗದಲ್ಲಿ ಪರಿಶೀಲನೆ ಮಾಡಲಿದ್ದು, ಈ ಸಂದರ್ಭದಲ್ಲಿ ಗರ್ಬಾದ ಪರಿಶೀಲನೆ ಕೂಡ ನಡೆಯಲಿದೆ ಎಂದು ಟಿಮ್ ಕರ್ಟಿಸ್ ವಿವರಿಸಿದ್ದಾರೆ. ಹೀಗಾದಲ್ಲಿ ಮುಂದಿನ ವರ್ಷದ ಅಂತ್ಯದ ವೇಳೆಗೆ ಸಮಿತಿಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯನ್ನು ನಿರ್ಧರಿಸುತ್ತದೆ.
ಒಂದು ದೇಶವು ಒಂದು ಸಮಯದಲ್ಲಿ ಒಂದು ಪರಂಪರೆಯನ್ನು ಶಿಫಾರಸು ಮಾತ್ರ ಸಲ್ಲಿಸಲು ಸಾಧ್ಯ. ಈಗ ಭಾರತದ 14 ವಿಶೇಷ ಆಚರಣೆಗಳು ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಮೂಲಕ ವಿಶ್ವದ ಅಗ್ರಜ ದೇಶಗಳಲ್ಲಿ ಭಾರತವೂ ಒಂದು ಎನಿಸಿಕೊಂಡಿದೆ. ಚೀನಾವು ನಂ. 1ಸ್ಥಾನದಲ್ಲಿದೆ. ಇಲ್ಲಿನ 30 ಆಚರಣೆಗಳು ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಕ್ರೊಯೇಷಿಯಾ, ಫ್ರಾನ್ಸ್, ಪೆರು ಮತ್ತು ಜಪಾನ್ ನಂತರದ ಸ್ಥಾನದಲ್ಲಿ ಇವೆ.