ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್ ಪ್ರಕರಣಗಳನ್ನು ನಿಭಾಯಿಸಲು ಮತ್ತು ರೋಗ ಇನ್ನಷ್ಟು ಹರಡುವುದನ್ನು ತಡೆಯಲು ಸದ್ಯ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗುರುವಾರ ಆರೋಗ್ಯ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಸಭೆ ನಡೆಸಿದೆ.
'ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಉದ್ದೇಶದಿಂದ ನಡೆಸಿದ ತಾಂತ್ರಿಕ ಸಭೆ ಇದಾಗಿತ್ತು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತುರ್ತು ವೈದ್ಯಕೀಯ ಪರಿಹಾರ ನಿರ್ದೇಶಕರಾದ ಡಾ.ಎಲ್. ಶಾಶ್ವತಿ ಚರಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್‌ಎಸಿಒ), ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಕೇರಳದಲ್ಲಿ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿ ಮೃತಪಟ್ಟ ಪ್ರಕರಣ ಸೇರಿ ಇದುವರೆಗೆ ದೇಶದಲ್ಲಿ 9 ಪ್ರಕರಣಗಳು ವರದಿಯಾಗಿವೆ.
ಮಂಕಿಪಾಕ್ಸ್ ಸೋಂಕಿತರಿಗೆ ಸಾಮಾನ್ಯವಾಗಿ ಜ್ವರ, ಗುಳ್ಳೆಗಳು, ಗಂಟುಗಳಿಂದ ಬಾತುಕೊಂಡ ದುಗ್ಧರಸ ಗ್ರಂಥಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಎರಡರಿಂದ ನಾಲ್ಕು ವಾರಗಳವರೆಗೆ ರೋಗ ಲಕ್ಷಣಗಳು ಇರುತ್ತವೆ. ಈ ಸೋಂಕು ಹಲವು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.
ಇಲಿಗಳು, ಅಳಿಲುಗಳು ಸೇರಿ ಸಣ್ಣ ಸಸ್ತನಿಗಳು ಮತ್ತು ಮಂಗಗಳು ಸೇರಿದಂತೆ ಸತ್ತ ಅಥವಾ ಜೀವಂತ ಕಾಡುಪ್ರಾಣಿಗಳ ಸಂಪರ್ಕದಿಂದ ದೂರವಿರಲು ಅಂತರರಾಷ್ಟ್ರೀಯ ಪ್ರಯಾಣಿಕರಿಗೂ ಸೂಚಿಸಲಾಗಿದೆ.