ಪ್ಯಾರಿಸ್: ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಚೆವಲಿಯರ್ ಡೆ ಲಾ ಲೀಜನ್ ಡಿ ಹಾನರ್ ಭಾಜನರಾಗಿದ್ದು, ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಪಕ್ಷದ ಮುಖಂಡರು ಅವರನ್ನು ಅಭಿನಂದಿಸಿದ್ದಾರೆ.
ಶಶಿ ತರೂರ್ ಅವರ ಲೇಖನಗಳು ಮತ್ತು ಭಾಷಣಗಳಿಗಾಗಿ ಫ್ರಾನ್ಸ್ ಸರ್ಕಾರ ಅವರನ್ನು ಪುರಸ್ಕರಿಸುತ್ತಿದೆ. ನವದೆಹಲಿಯಲ್ಲಿನ ಫ್ರೆಂಚ್ ರಾಯಭಾರಿ ಇಮ್ಯಾನುಯೆಲ್ ಲೆನೈನ್ ಪ್ರಶಸ್ತಿ ವಿಷಯವನ್ನು ಶಶಿ ತರೂರ್ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಟ್ವೀಟರ್ ಮೂಲಕ ಶಶಿ ತರೂರು ಅಭಿನಂದನೆ ಸಲ್ಲಿಸಿದ್ದಾರೆ.
ಫ್ರಾನ್ಸ್ ನೊಂದಿಗಿನ ನಮ್ಮ ಸಂಬಂಧವನ್ನು ಗೌರವಿಸುವ, ಭಾಷೆಯನ್ನು ಪ್ರೀತಿಸುವ ಹಾಗೂ ಸಂಸ್ಕೃತಿಯನ್ನು ಮೆಚ್ಚುವವನಾಗಿ, ನಾನು ಈ ರೀತಿಯಲ್ಲಿ ಗುರುತಿಸಿಕೊಂಡಿರುವುದು ನನಗೆ ಗೌರವವಾಗಿದೆ. ನನಗೆ ಈ ಗೌರವನ್ನು ನೀಡಲು ಸೂಕ್ತವೆಂದು ಕಂಡವರಿಗೆ ನನ್ನ ಕೃತಜ್ಞತೆ ಮತ್ತು ಮೆಚ್ಚುಗೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಕೇರಳದ ಕಾಂಗ್ರೆಸ್ ಘಟಕ, ಯುವ ಕಾಂಗ್ರೆಸ್ ಘಟಕ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಶಶಿ ತರೂರ್ ಅವರನ್ನು ಅಭಿನಂದಿಸಿದ್ದಾರೆ. ಅತ್ಯುದ್ಬುತ ಶಿಕ್ಷಣ ಮತ್ತು ಅತ್ಯುತ್ತಮ ಜ್ಞಾನಕ್ಕಾಗಿ ಶಶಿ ತರೂರ್ ಪ್ರತಿಷ್ಠಿತ ಫ್ರಾನ್ಸ್ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗಿರುವುದಾಗಿ ಲೋಕಸಭೆಯಲ್ಲಿನ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.