ನವದೆಹಲಿ: ದೆಹಲಿಯಲ್ಲಿರುವ ರೋಹಿಂಗ್ಯಾ ಮುಸ್ಲಿಮರಿಗೆ ಇಡಬ್ಲ್ಯುಎಸ್ ಫ್ಲಾಟ್‌ಗಳನ್ನು ನೀಡಲು ಯಾವುದೇ ನಿರ್ದೇಶನ ನೀಡಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ(ಎಂಎಚ್ಎ) ಬುಧವಾರ ಸ್ಪಷ್ಟಪಡಿಸಿದೆ ಮತ್ತು ಅಕ್ರಮ ವಿದೇಶಿಗರು ಅವರ ಪ್ರಸ್ತುತ ಸ್ಥಳದಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಸೂಚಿಸಿದೆ.
ರೋಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಹೊರಭಾಗದಲ್ಲಿರುವ ಬಕ್ಕರ್‌ವಾಲಾದ ಅಪಾರ್ಟ್‌ಮೆಂಟ್‌ಗಳಿಗೆ ಸ್ಥಳಾಂತರಿಸಲಾಗುವುದು ಮತ್ತು ಅವರಿಗೆ ಮೂಲಭೂತ ಸೌಕರ್ಯಗಳು, ಪೊಲೀಸ್ ಭದ್ರತೆಯನ್ನು ಒದಗಿಸಲಾಗುವುದು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಹೇಳಿದ್ದರು.
ಹರ್ದೀಪ್ ಸಿಂಗ್ ಪುರಿ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕೇಂದ್ರ ಗೃಹ ಸಚಿವಾಲಯ, ಕಾನೂನಿನ ಪ್ರಕಾರ ರೋಹಿಂಗ್ಯಾ ಅಕ್ರಮ ವಿದೇಶಿಗರನ್ನು ಗಡಿಪಾರು ಮಾಡುವವರೆಗೆ ಅವರನ್ನು ಬಂಧನ ಕೇಂದ್ರಗಳಲ್ಲಿ ಇರಿಸಲಾಗುವುದು ಮತ್ತು ಅವರು ವಾಸ್ತವ್ಯದ ಪ್ರಸ್ತುತ ಸ್ಥಳವನ್ನು ಬಂಧನ ಕೇಂದ್ರವೆಂದು ಘೋಷಿಸಲು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದೆ.
"ರೋಹಿಂಗ್ಯಾ ಅಕ್ರಮ ವಿದೇಶಿಯರ ಕುರಿತು ಕೆಲವು ಮಾಧ್ಯಮಗಳ ವರದಿಗಳಿಗೆ ಸಂಬಂಧಿಸಿದಂತೆ, ದೆಹಲಿಯಲ್ಲಿ ರೋಹಿಂಗ್ಯಾ ಅಕ್ರಮ ವಲಸಿಗರಿಗೆ ಫ್ಲಾಟ್‌ಗಳನ್ನು ನೀಡಲು ಕೇಂದ್ರ ಗೃಹ ಸಚಿವಾಲಯ ಯಾವುದೇ ನಿರ್ದೇಶನಗಳನ್ನು ನೀಡಿಲ್ಲ" ಎಂದು ಎಂಎಚ್ಎ ವಕ್ತಾರರು ತಿಳಿಸಿದ್ದಾರೆ.
ದೇಶದಲ್ಲಿ ಆಶ್ರಯ ಪಡೆದವರನ್ನು ಭಾರತ ಯಾವಾಗಲೂ ಸ್ವಾಗತಿಸುತ್ತದೆ. ಎಲ್ಲಾ ರೋಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಬಕ್ಕರ್‌ವಾಲಾ ಪ್ರದೇಶದ EWS ಫ್ಲಾಟ್‌ಗಳಿಗೆ ಸ್ಥಳಾಂತರಿಸಲಾಗುವುದು. ಅವರಿಗೆ ಮೂಲಭೂತ ಸೌಕರ್ಯಗಳು, ರಾತ್ರಿಯಿಡೀ ದೆಹಲಿ ಪೊಲೀಸರಿಂದ ಭದ್ರತೆ ನೀಡಲಾಗುತ್ತದೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದರು.
ಉದ್ದೇಶಪೂರ್ವಕವಾಗಿ ಸಿಎಎ ಮತ್ತು ನಿರಾಶ್ರಿತರ ಯೋಜನೆಯನ್ನು ಜೋಡಿಸಿ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ದೇಶದ ಆಶ್ರಯವನ್ನು ಅರಸಿ ಬಂದವರಿಗೆ ಆಶ್ರಯ ಕೊಡಲಿದ್ದೇವೆ. ಭಾರತ 1951 ರ ನಿರಾಶ್ರಿತರ ಸಮಾವೇಶವನ್ನು ಗೌರವಿಸುತ್ತದೆ. ಜನಾಂಗ, ಧರ್ಮ ಅಥವಾ ಧರ್ಮವನ್ನು ಲೆಕ್ಕಿಸದೇ ಎಲ್ಲರಿಗೂ ಆಶ್ರಯ ನೀಡುತ್ತದೆ ಎಂದು ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದರು.