ನವದೆಹಲಿ: ರೈಲಿನಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡುತ್ತಿದ್ದ ರಿಯಾಯಿತಿಯನ್ನು ಸ್ಲೀಪರ್ ದರ್ಜೆ ಮತ್ತು ಎ.ಸಿ. 3 ಟೈರ್‌ನಲ್ಲಿ ತುರ್ತಾಗಿ ಮರುಜಾರಿಗೊಳಿಸಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.
ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ಶೇ 40 -50 ರಿಯಾಯಿತಿ ನೀಡಲಾಗಿತ್ತು.
ಎಲ್ಲಾ ವಿಭಾಗಗಳಲ್ಲಿ ನೀಡುತ್ತಿದ್ದ ರಿಯಾಯಿತಿಯನ್ನು ರೈಲ್ವೆಯು ಕೋವಿಡ್ ಕಾರಣಕ್ಕೆ ನಿಲ್ಲಿಸಿತ್ತು ಎಂದು ಆ.4 ರಂದು ರೈಲ್ವೆ ಸ್ಥಾಯಿ ಸಮಿತಿ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಹಿರಿಯ ನಾಗರಿಕರು ತಮ್ಮ ರಿಯಾಯಿತಿಗಳನ್ನು ಸ್ವಯಂಪ್ರೇರಣೆಯಿಂದ ತ್ಯಜಿಸಲು ಪ್ರೋತ್ಸಾಹಿಸುವ 'ಗಿವ್ ಅಪ್' ಯೋಜನೆಗೆ ವ್ಯಾಪಕ ಪ್ರಚಾರವನ್ನು ನೀಡುವಂತೆ ಸಚಿವಾಲಯವನ್ನು ಒತ್ತಾಯಿಸಿದೆ.
ಅಂಗವಿಕಲ ಪ್ರಯಾಣಿಕರಿಗೆ 4 ವಿಭಾಗಗಳಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ರೋಗಿಗಳಿಗೆ 11 ವಿಭಾಗಗಳಲ್ಲಿ ರಿಯಾಯಿತಿ ಹೊರತುಪಡಿಸಿ ಇತರೆ ಪ್ರಯಾಣಿಕರಿಗೆ ನೀಡುತ್ತಿದ್ದ ರಿಯಾಯಿತಿ ಹಿಂಪಡೆಯಲಾಗಿದೆ ಎಂದು ರೈಲ್ವೆ ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ.
ಪ್ರತಿ ವರ್ಷ ರೈಲ್ವೆ ಹಿರಿಯ ನಾಗರಿಕರ ರಿಯಾಯಿತಿಗಾಗಿ ₹ 2 ಸಾವಿರ ಕೋಟಿ ವ್ಯಯಿಸುತ್ತಿದೆ.